ಶವ ಸಂಸ್ಕಾರಕ್ಕೆ ತೆರಳುತ್ತಿದ್ದವರು ಅಪಘಾತದಲ್ಲಿ ಸಾವು: ತಂದೆ-ತಾಯಿ ಕಳೆದುಕೊಂಡಿದ್ದ ಮಗು ರಕ್ಷಿಸಿದ ಶಿಕ್ಷಕಿ

acident 2 feb 03 2020
Published on

ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿ 50ರ ಕ್ಯಾಸನಕೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮೂವರು ಶವ ಸಂಸ್ಕಾರಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಇಳಕಲ್​ ಮೂಲದ ವಸಂತ್​ ಕುಮಾರ್​, ಪತ್ನಿ ವಿನುತಾ ಸೇರಿ ಮೂವರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ವಸಂತ್​ ಕುಮಾರ್​ ದಂಪತಿ ಪುತ್ರಿ ಋತ್ವಿಕಾಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ವಸಂತ್​ ಕುಮಾರ್​ ಮಡಿಕೇರಿಯ ಮೂರ್ನಾಡು ಗ್ರಾಮದಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಅವರು ಕುಟುಂಬ ಸಮೇತ ಮೂರ್ನಾಡು ಗ್ರಾಮದಲ್ಲಿ ವಾಸವಾಗಿದ್ದರು. ವಸಂತ್​ ಕುಮಾರ್​ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಕಾರಿನಲ್ಲಿ ಇಳಕಲ್​ಗೆ ತೆರಳುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಗುವಿಗೆ ಹಾಲುಣಿಸಿದ ಶಿಕ್ಷಕಿ: ಅಪಘಾತದಲ್ಲಿ ತಂದೆ ತಾಯಿ ಮೃತಪಟ್ಟಿದ್ದನ್ನು ನೋಡುತ್ತಾ ಗಾಯಗೊಂಡು ಅಳುತ್ತಿದ್ದ ಋತ್ವಿಕಾಳನ್ನು ಸ್ಥಳದಲ್ಲಿದ್ದ ಶಿಕ್ಷಕಿ ರಕ್ಷಣೆ ಮಾಡಿ ಮಗುವಿಗೆ ಹಾಲುಣಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯ ಶಿಕ್ಷಕಿ ಮೋಕ್ಷಾವತಿ ಅಪಘಾತ ಸಂಭವಿಸಿದ ವೇಳೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಮಗಳು ಅಳುತ್ತಿರುವುದನ್ನು ನೋಡಿ ರಕ್ಷಣೆಗೆ ಧಾವಿಸಿದರು.
ಶಿಕ್ಷಕಿ ಮಗು ರಕ್ಷಣೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net