ಬಳ್ಳಾರಿ : ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ ಹೊಂದಲು ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ನಡೆದ ಸಂವಿಧಾನ ದಿನಾಚರಣೆಯಲ್ಲಿ ಸಂವಿಧಾನ ಪ್ರಸ್ತಾವನೆ ಬೋಧಿಸಿ ಮಾತನಾಡಿದರು. ಆಶೋತ್ತರ ಪೂರಕವಾದ ಸಂವಿಧಾನ ನೀಡಲು ಪ್ರಮುಖ ಪಾತ್ರ ವಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಮಿತಿಯನ್ನು ಈ ದಿನ ಸ್ಮರಿಸಬೇಕಿದೆ. ಸಂವಿಧಾನದ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು, ಜಾತಿ, ಧರ್ಮ, ಎಲ್ಲೆ ಮೀರಿ ನಾವೆಲ್ಲರೂ ಒಂದು ಎನ್ನುವ ಸಂಕಲ್ಪ ತೊಡಬೇಕಲ್ಲದೆ ಪ್ರತಿಯೊಬ್ಬ ನಾಗರೀಕರು ರಾಷ್ಟದ ಏಕತೆ ಮತ್ತು ಅಖಂಡತೆ ಉಳಿಸಿಕೊಳ್ಳಲು ಶ್ರಮಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಮಾತನಾಡಿ, ಸಂವಿಧಾನವು ಹಲವಾರು ಮಹನೀಯರ ಶ್ರಮ ಹಾಗೂ ದಶಕಗಳ ನಿರಂತರ ಹೋರಾಟದ ಪ್ರತಿಫಲದಿಂದ ದೊರೆತ್ತಿದ್ದು, ಇತರೆ ದೇಶಗಳ ಸಂವಿಧಾನಗಳ ಅವಲೋಕಿಸಿ ಬಹುದೊಡ್ಡದಾದ ಸಂವಿಧಾನ ರಚಿಸಲ್ಪಟ್ಟಿದೆ ಎಂದರು.