ಸುರಕ್ಷಿತ ವಾತಾವರಣ ಸ್ತ್ರೀಯರ ಹಕ್ಕು

Published on

ಬಳ್ಳಾರಿ : ಮಹಿಳೆಯರು ತಾವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷಿತ ಕೆಲಸದ ವಾತಾವರಣ ಹೊಂದುವುದು ಮಹಿಳೆಯರ ಮೂಲಭೂತ ಹಕ್ಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.

ನಗರದ ಹೊಸ ನ್ಯಾಯಾಲದಯ ವಿಸಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ಹಿಂಸಾಚಾರ ವಿರೋಧಿ ದಿನಾಚರಣೆ ಅಂಗವಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಅಧಿನಿಯಮದ ಕುರಿತು ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲಸದ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶವಿದೆ. ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆಯರಿಲ್ಲದ ಕ್ಷೇತ್ರವಿಲ್ಲ. ಹಾಗಾಗಿ ಮಹಿಳೆಯರನ್ನು ಮೌಲ್ಯಯುತ ಸಹೋದ್ಯೋಗಿಗಳಂತೆ ಕಾಣಬೇಕು ಎಂದರು.

ಲೈಂಗಿಕ ಕಿರುಕುಳವು ನೊಂದವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಒಟ್ಟಾರೆ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರು ಆತಂಕ, ಖಿನ್ನತೆ, ಒತ್ತಡ ಮತ್ತು ಆಘಾತದಿಂದ ಬಳಲುತ್ತಾರೆ. ಹಾಗಾಗಿ ಮಹಿಳೆಯರು ಮುಖ್ಯವಾಗಿ ಲೈಂಗಿಕ ಕಿರುಕುಳದ ಬಗ್ಗೆ ಅರಿವು ಹೊಂದಬೇಕು. ಲೈಂಗಿಕ ಕಿರುಕುಳ ಎಂದರೇನು ಅಥವಾ ಅದನ್ನು ಹೇಗೆ ವರದಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಹೊಂದಬೇಕು ಎಂದರು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಆಂತರಿಕ ದೂರುಗಳ ಸಮಿತಿಗೆ ಇರುತ್ತದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲ ಸಂಸ್ಥೆಗಳಲ್ಲಿ ಸಮಿತಿ ಸ್ಥಾಪಿಸಲು ಕಾನೂನಿನ ಮೂಲಕ ಅಗತ್ಯವಿದೆ ಎಂದರು.

ವಕೀಲೆ ಶಿವಲೀಲ ಅವರು, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಅಧಿನಿಯಮದ ಕುರಿತು ವಿವರವಾಗಿ ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net