ಬಳ್ಳಾರಿ ; ಎಐ ಪ್ರಭಾವದಿಂದಾಗಿ ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಯ ವಿಧಾನಗಳಲ್ಲಿ ಹೊಸ ಯುಗ ಆರಂಭಗೊಂಡಿದೆ ಎಂದು ಖರಗಪುರ ಐಐಟಿಯ ಗಣಿಗಾರಿಕೆ ಇಂಜಿನಿಯರಿಂಗ ವಿಭಾಗದ ಪ್ರೊ.ಡಾ. ಎ.ಕೆ. ಮಜುಂದಾರ ಅಭಿಪ್ರಾಯಪಟ್ಟರು.
ನಂದಿಹಳ್ಳಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಖನಿಜ ಸಂಸ್ಕರಣಾ ಉದ್ಯಮದಲ್ಲಿ ಸ್ವಯಂಚಾಲಿತ ಮತ್ತು ಸಂವೇದಕ ತಂತ್ರಜ್ಞಾನಗಳ ಅನುಷ್ಠಾನ ವಿಷಯದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ ವೀಕ್ಷಣೆ ತಂತ್ರಜ್ಞಾನಗಳ ಮೂಲಕ ಖನಿಜಗಳನ್ನು ತಕ್ಷಣವೇ ಗುರುತಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ವಿಂಗಡಿಸಬಹುದು. ಇದು ಉತ್ಪಾದಕತೆ ಹೆಚ್ಚಿಸುವ ಜತೆಗೆ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ಎಐ-ಆಧಾರಿತ ನಿರ್ಧಾರ ಕೈಗೊಳ್ಳುವಿಕೆ, ದೂರ ನಿಯಂತ್ರಣ ಹಾಗೂ ಸ್ವಾಯತ್ತ ಪ್ರಕ್ರಿಯಾ ನಿರ್ವಹಣೆಯು ಖನಿಜ ಸಂಸ್ಕರಣಾ ಉದ್ಯಮವನ್ನು ಆಧುನೀಕರಣಗೊಳಿಸುತ್ತಿವೆ. ಆಟೋಮೇಷನ್ ತಜ್ಞರು, ಎಐ ಇಂಜಿನಿಯರ್‌ಗಳು ಮತ್ತು ಡೇಟಾ ವಿಶ್ಲೇಷಕರಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಖನಿಜ ಸಂಸ್ಕರಣ ವಿಭಾಗ ಮತ್ತು ಕ್ಯೂಮಿ ಸೆರಾಮಿಕ್ಸ್ ಉದ್ಯಮದ ನಡುವೆ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಲಾಯಿತು.