ಬಳ್ಳಾರಿ ; ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲಗರ್ಭದಲ್ಲಿ, ಹುದುಗಿ ಹೋಗಿದ್ದ ವಚನ ಸಾಹಿತ್ಯವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ಡಾ.ಫ.ಗು.ಹಳಕಟ್ಟಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಆರ್‌ವೈಎಂಸಿ ಕಾಲೇಜಿನ ಪ್ರೊ.ಡಾ.ಎ.ತಿಮ್ಮನಗೌಡ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರು ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ವಚನಗಳನ್ನು ಮುದ್ರಿಸಿದವರು. ಹಳಕಟ್ಟಿಯವರು ಸ್ವತಃ ಮೊಳೆಗಳನ್ನು ಜೋಡಿಸಿ, ಅಚ್ಚು ಹಾಕಿ, ಪೆಡಲ್ ತುಳಿದು, ಮುದ್ರಿಸಿ ಪ್ರಕಟಿಸಿದ ಸಾಹಿತ್ಯದಿಂದ 250 ವಚನಕಾರರ ವಚನಗಳನ್ನು, ಸಾಹಿತ್ಯವನ್ನು ಹೊರತಂದರು. ಆ ಮುಂಚೆ ಕೇವಲ 50 ವಚನಕಾರರ ವಚನಗಳು ಬೆಳಕು ಕಂಡಿದ್ದವು. ಇದು ವಚನ ಸಾಹಿತ್ಯಕ್ಕೆ ಅವರು ನೀಡಿದ ಅಮೋಘ ಕೊಡುಗೆ ಎಂದರು.