ಬಳ್ಳಾರಿ : ಯುವಕರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಯೋಜನೆಯಡಿ ಉದ್ಯಮ ಪ್ರಾರಂಭಿಸಲು ಸುವರ್ಣ ಅವಕಾಶವಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಕೆಪೆಕ್ ಸಂಸ್ಥೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ನಿಯಮಬದ್ದಗೊಳಿಸುವಿಕೆ ಯೋಜನೆಯ ಜಿಲ್ಲಾಮಟ್ಟದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಿರು ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭಿಸಲು ಒಂಬತ್ತು ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ದೊರೆಯಲಿದೆ. ಇದರಲ್ಲಿ ಕೇಂದ್ರದಿಂದ ಐದು ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ದೊರೆಯುತ್ತದೆ. ಕೇವಲ 1 ಲಕ್ಷ ರೂ. ಬಂಡವಾಳ ಹೂಡಿ ಹತ್ತು ಲಕ್ಷ ರೂ. ಉದ್ಯಮ ಪ್ರಾರಂಭಿಸಬಹುದು. ದೊಡ್ಡ ಕನಸಿಗೆ ಚಿಕ್ಕ ಹೆಜ್ಜೆಯಾಗಿ ಅಡಿಗಲ್ಲು ಹಾಕಲು ಸಾಧ್ಯವಾಗುವುದರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಈ ಯೋಜನೆಯಡಿ ಆಹಾರ ಸಂಸ್ಕರಣೆಗೆ ಒತ್ತು ಕೊಡುವುದರಿಂದ ಮಹಿಳೆಯರು ಮನೆಯಿಂದಲೇ ಜೋಳದ ರೊಟ್ಟಿ, ಚಕ್ಕುಲಿ, ಕಾರ, ಹಪ್ಪಳ, ಸಂಡಿಗೆ ಮತ್ತು ಇತರ ಪದಾರ್ಥಗಳನ್ನು ಆಹಾರ ಸಂಸ್ಕರಣೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.