ಬಜೆಟ್‌ನಲ್ಲಿ ನಿರೀಕ್ಷೆಗಳ ಮಹಾಪೂರ

Published on

ಬಳ್ಳಾರಿ : ರಾಜ್ಯ ಸರ್ಕಾರದ ಪ್ರಸ್ತಕ 2025 -26ನೇ ಸಾಲಿನ ಬಜೆಟ್ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸ ಯೋಜನೆಗಳು, ಚಾಲ್ತಿಯಲ್ಲಿರುವ ವಿವಿಧ ಕಾಮಗಾರಿಗಳಿಗೆ ಅನುದಾನ ಸೇರಿದಂತೆ ಹತ್ತಾರು ನಿರೀಕ್ಷೆಗಳ ಗರಿಗೆದರಿವೆ.

ಜಿಲ್ಲೆಯಲ್ಲಿ ರಾಬಕೊವಿ ಒಕ್ಕೂಟದ ಮೆಗಾಡೈರಿ, ಬಳ್ಳಾರಿ ಕೋಟೆಗೆ ರೂಪ್ ವೇ, ಸರ್ಕಾರಿ ಕಾನೂನು ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭ, ರೇಡಿಯೊ ಪಾರ್ಕ್ ರೈಲ್ವೆ ಮೇಲ ಸೇತುವೆ ಕಾಮಗಾರಿ, ಒಣ ಮೆಣಸಿನಕಾಯಿ ಮಾರುಕಟ್ಟೆ, ಜೀನ್ಸ್ ಅಪೆರೆಲ್ ಪಾರ್ಕ್, ವೈ.ಕಗ್ಗಲ್ ಏತ ನೀರಾವರಿ ಯೋಜನೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, 30 ಹಾಸಿಗೆಗಳ ಸಮುದಾಯ ಕೇಂದ್ರ, ಕುಡಿಯುವ ನೀರಿನ ಮೂರನೇ ಹಂತದ ಯೋಜನೆ, ಕಂಪ್ಲಿ - ಗಂಗಾವತಿ ಸೇತುವೆ ಮರು ನಿರ್ಮಾಣ, ಕೌಶಲ್ಯ ಕೇಂದ್ರ, ನೂತನ ರಸ್ತೆಗಳ ಅಭಿವೃದ್ದಿ ಸೇರಿದಂತೆ ಹಲವು ಅರೆಬರೆ ಕಾಮಗಾರಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ದೊರೆಯುವ ನಿರೀಕ್ಷೆಯಿದೆ.

ಕಳೆದ ಹಲವು ವರ್ಷಗಳಿಂದ ಸರ್ಕಾರಿ ಕಾನೂನು ಪದವಿ ಕಾಲೇಜು ಘೋಷಣೆಯಾಗುವ ಸಾಧ್ಯತೆಯಿದೆ. ನಗರ ಹೃದಯಭಾಗದಲ್ಲಿರುವ ಈ ಹಿಂದೆ ಇದ್ದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮಳಿಗೆಗಳು ಸದ್ಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಈ ಹಿನ್ನೆಲೆ ಹಳೆಯ ನ್ಯಾಯಾಲಯ ಕಟ್ಟಡ ಖಾಲಿಯಿದೆ. ಈ ಖಾಲಿ ಕಟ್ಟಡದಲ್ಲಿ ಸರ್ಕಾರಿ ಕಾನೂನು ಪದವಿ ಕಾಲೇಜು ಸ್ಥಾಪಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೂಡ ಕೇಳಿ ಬಂದಿತ್ತು. ಈ ಹಿಂದೆ ಬಳ್ಳಾರಿ ಜಿಲ್ಲಾಧಿಕಾರಿಯೊಬ್ಬರು ಕಟ್ಟಡವನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಪತ್ರ ಬರೆದಿದ್ದರಿಂದ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅದು ಇತ್ಯರ್ಥವಾಗಿದ್ದರೆ ಘೋಷಣೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಜಿಲ್ಲೆಯ ರೈತರು ಶೇ. 90% ರಷ್ಟು ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಆದ್ದರಿಂದ, ನಗರದ ಹೊರವಲಯದ ಬಳಿ 23.25 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡೆದು ಎಪಿಎಂಸಿಗೆ ವಹಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಿಸಿದರೆ ಈ ಭಾಗದ ಮೆಣಸಿನಕಾಯಿ ಬೆಳೆಗಾರರ ಸಂರಕ್ಷಣೆಗೆ ಅದ್ಯತೆ ನೀಡಿದಂತೆಯಾಗುತ್ತದೆ. ಏಷ್ಯಾದಲ್ಲಿಯೇ ಏಕಶಿಲೆ ಬೆಟ್ಟ ಖ್ಯಾತಿ ಎಂಬ ಖ್ಯಾತಿ ಪಡೆದಿರುವ ಬಳ್ಳಾರಿ ಗುಡ್ಡಕೆ ರೂಪ್ ವೇ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದು ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಅಲ್ಲದೆ, ರಾಬಕೊವಿ ಒಕ್ಕೂಟದ ಮೆಗಾಡೈರಿ ಈಗಾಗಲೇ ಸ್ಥಳ ಗುರುತಿಸಲಾಗಿದ್ದು ಹೊಸ ಕಟ್ಟಡದ ಕಾಮಗಾರಿಗೆ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಗರದ ಹೊರವಲಯ ಸಂಜೀವರಾಯನ ಕೋಟೆಯಲ್ಲಿ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪೆರೆಲ್ ಪಾರ್ಕ್‌ಗೂ ಸ್ಥಳ ಸ್ವಾಧೀನ ಪಡೆದುಕೊಳ್ಳುವಲ್ಲಿ ಇಲಾಖೆ ಮುಂದಾಗಿದ್ದು ಅನುದಾನ ನಿರೀಕ್ಷೆಯಲ್ಲಿದೆ. ಕಳೆದ ಹನ್ನೊಂದು ವರ್ಷಗಳಿಂದ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದ್ದು ಈ ವರ್ಷದ ಬಜೆಟ್‌ನ ಅನುದಾನದಿಂದ ಪೂರ್ಣಗೊಳ್ಳುವ ಭರವಸೆಯಿದೆ.

ಗ್ರಾಮೀಣದ ಮಳೆಯಾಶ್ರೀತ ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಸಲುವಾಗಿ ವೈ.ಕಗ್ಗಲ್ ಏತ ನೀರಾವರಿ ಮರುಸ್ಥಾಪನೆ ನಿರೀಕ್ಷೆಯಿದೆ. ವೈ.ಕಗ್ಗಲ್ ಗ್ರಾಮದ ಬಳಿ ಹಿಂದೆಯೇ ಏತನೀರಾವರಿ ನಿರ್ಮಿಸಲಾಗಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ನೆನೆಗುದಿಗೆ ಬಿದ್ದಿದೆ. ಕಳೆದ ಕೆಲ ವರ್ಷಗಳಿಂದ ವೇದಾವತಿ (ಹಗರಿ) ನದಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ಈ ನೀರನ್ನು ಸದ್ಬಳಕೆ ಮಾಡಿಕೊಂಡಲ್ಲಿ 6600 ಎಕರೆ ಮಳೆಯಾಶ್ರಿತ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ವೈ.ಕಗ್ಗಲ್ ಏತನೀರಾವರಿ ಯೋಜನೆಯ ಮರುಸ್ಥಾಪನೆಗಾಗಿ 130 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಅನುದಾನ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಸಿರಗುಪ್ಪ ನಗರ ಕುಡಿಯುವ ನೀರಿನ ಮೂರನೇ ಹಂತದ ಯೋಜನೆಗೆ ಮತ್ತು ಧೂಳುಮುಕ್ತ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದು, ಯುಜಿಡಿ ಯೋಜನೆ ಅಡಿ ಅನುದಾನ ಹಾಗೂ ಮೂಲಸೌಕರ್ಯಗಳಿಗೆ ಅನುದಾನ ಒದಗಿಸುವ ನಿರೀಕ್ಷೆಯಿದೆ. ಕಂಪ್ಲಿಯಲ್ಲಿ ನೂರು ಎಕರೆ ಜಮೀನುಳ್ಳ ಜಿಲ್ಲಾ ಕೃಷಿ ತರಬೇತಿ ಕೇಂದ್ರವಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬೀಳುತ್ತಿರುವ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಂಪ್ಲಿ - ಗಂಗಾವತಿ ಸೇತುವೆ ಮರು ನಿರ್ಮಾಣ, ಕ್ಷೇತ್ರದಲ್ಲಿ ವಿದ್ಯಾರ್ಥಿ ನಿಲಯಗಳು , ಇಂಜನಿಯರಿಂಗ್ ಕಾಲೇಜು, ಏತನೀರಾವರಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಘೋಷಣೆಯಾಗುವ ನಿರೀಕ್ಷೆಯಿದೆ. ಸಂಡೂರು ತಾಲೂಕಿನಲ್ಲಿ ಕೌಶಲ್ಯ ಕೇಂದ್ರ, ಕುಡಿತಿನಿ ಪಟ್ಟಣದಲ್ಲಿ 30 ಹಾಸಿಗೆಯ ಸಮುದಾಯ ಕೇಂದ್ರ ಹಾಗೂ ನೂತನ ರಸ್ತೆಗಳ ಅಭಿವೃದ್ಧಿಗೆ ಅನುದಾನ ದೊರೆಯುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ನೂತನ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂಬ ಭರವಸೆ ಜನರದ್ದಾಗಿದೆ.

ಕೋಟ್... ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿ, ಈ ಭಾಗದ ಮೆಣಸಿನಕಾಯಿ ಬೆಳೆಗಾರರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಒಣ ಮೆಣಸಿನಕಾಯಿ ಬೆಲೆ ಕುಸಿದಿದ್ದು, ಕನಿಷ್ಠ ಬೆಂಬಲ ಘೋಷಣೆ ಮಾಡಿ ಸರ್ಕಾರವೇ ಒಣ ಮೆಣಸಿನಕಾಯಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ನಬಾರ್ಡ್ ನ ಆರ್ಥಿಕ ನೆರವಿನಿಂದ ಪ್ರಾರಂಭಿಲು ಉದ್ದೇಶಿಸಿರುವ ಕೋಲ್ಡ್ ಸ್ಟೋರೇಜ್ ಶೀಘ್ರದಲ್ಲೇ ನಿರ್ಮಿಸಬೇಕು.

- ವೈ.ಎಂ.ಸತೀಶ್, ಸದಸ್ಯ ವಿಧಾನ ಪರಿಷತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net