ಸಂಭ್ರಮದ ಸಿಡಿಬಂಡಿ ಉತ್ಸವ

Published on

ಬಳ್ಳಾರಿ : ಗಣಿನಾಡಿನ ಆದಿದೇವತೆ ಶ್ರೀಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ಲಕ್ಷಾಂತರ ಭಕ್ತರ ಸಮೂಹದ ನಡುವೆ ಮಂಗಳವಾರ ಜರುಗಿತು.

ಸಿಡಿಬಂಡಿ ರಥೋತ್ಸವ ನಿಮಿತ್ತ ಕನಕದುರ್ಗಮ್ಮ ದೇವಿಯಮೂರ್ತಿಯನ್ನು ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಪ್ರವೇಶದ್ವಾರ, ಗರ್ಭಗುಡಿ ಹಾಗೂ ಗೋಪುರಗಳನ್ನು ವಿವಿಧ ಪುಷ್ಪಾ, ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಇಲ್ಲಿನ ಕೌಲಬಜಾರ್ ಪ್ರದೇಶದಿಂದ ಗಾಣಿಗ ಸಮುದಾಯದ ಕುಟುಂಬದವರ ಮನೆಯಿಂದ ಸಿಡಿ ಬಂಡಿಯನ್ನು ಸಿಂಗರಿಸಿಕೊಂಡು, ಪೂಜೆ ಸಲ್ಲಿಸಿ, ಮೆರವಣಿಗೆ, ತಾಳ ವಾದ್ಯಗಳ ಮೂಲಕ ಸೋಮವಾರ ಸಂಜೆ ದೇವಸ್ಥಾನದ ಆವರಣದಲ್ಲಿ ನಿಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆ ಮೊದಲಿಗೆ ಸಣ್ಣ ದುರ್ಗಮ್ಮನ ಗುಡಿಯಿಂದ ಕನಕ ದುರ್ಗಮ್ಮ ದೇವಸ್ಥಾನವರೆಗೆ ಮೇಟಿ ಕುಂಭ ಪೂಜೆ ನಡೆಯಿತು. ಮಧ್ಯಾಹ್ನ ಗಾಣಿಗ ಸಮಾಜವು ದೇವಿಗೆ ನೈವೇದ್ಯ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಸಿಡಿಬಂಡಿ ಉತ್ಸವಕ್ಕೆ ಮೂರು ಜೋಡಿಯ ಎತ್ತುಗಳನ್ನು ಕಟ್ಟಿ ದೇವಸ್ಥಾನದ ಸುತ್ತ ಮೂರು ಸುತ್ತು ಸಿಡಿಬಂಡಿ ಸುತ್ತಲಾಯಿತು. ಉತ್ಸವಕ್ಕೆ ಭಕ್ತ ಸಮೂಹ ಹೂ ಹಣ್ಣು ಎಸೆದು ಭಕ್ತಿ ಅರ್ಪಿಸಿದರೇ, ಇನ್ನೂ ಕೆಲ ಭಕ್ತರು ಜೀವಂತ ಕೋಳಿಗಳನ್ನು ಸಿಡಿಬಂಡಿಗೆ ತೂರುವ ಮೂಲಕ ಭಕ್ತಿ ಸಮರ್ಪಿಸಿದರು. ಭಕ್ತರು ಸಾಲಾಗಿ ತೆರಳಿ ದೇವಿಯ ದರ್ಶನ ಪಡೆಯಲು ಬ್ಯಾರಿಕೇಡ್ ನಿರ್ಮಿಸಲಾಗಿತ್ತು. ದೇವಸ್ಥಾನದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ದೇಗುಲದ ವತಿಯಿಂದ ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಸಿಡಿಬಂಡಿ ಉತ್ಸವಕ್ಕೆ ರಾಜ್ಯ ಸೇರಿ ನೆರೆಯ ಆಂಧ್ರ, ತೆಲಂಗಾಣ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸೋಮವಾರ ರಾತ್ರಿಯಿಂದಲೇ ದೂರದ ಊರಿನಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದುಬಂದಿತ್ತು. ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ನೆರಳಿನ ವ್ಯವಸ್ಥೆ, ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.ನಗರದ ವಿವಿಧ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.

ನಗರದ ರಾಯಲ್ ವೃತ್ತ, ಎಸ್ಪಿ ಸರ್ಕಲ್, ಬಿಡಿಎಎ ಫುಟ್ಬಾಲ್ ಮೈದಾನ ಎದುರು ಸೇರಿದಂತೆ ವಿವಿಧಡೆ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ಭಕ್ತರಿಗೆ ರಸ್ತೆಯುದ್ಧಕ್ಕೂ ಮಜ್ಜಿಗೆ, ಪಾನಕ, ಕುಡಿವ ನೀರಿನ ವ್ಯವಸ್ಥೆ ಸೇರಿ ವಿವಿಧ ಸೇವೆಗಳನ್ನು ಕಲ್ಪಿಸಲಾಗಿತ್ತು. ಸಿಡಿ ಬಂಡಿ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ನಗರದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ ಹಾಗೂ ಸಂಸ್ಥೆಗಳಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

ಸಂಚಾರ ಬದಲಾವಣೆ : ಉತ್ಸವದ ಹಿನ್ನೆಲೆ ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ 2ರಿಂದ ಬುಧವಾರ ಬೆಳಗ್ಗೆ 6ರ ವರೆಗೆ ಬೆಂಗಳೂರು ಕಡೆಯಿಂದ ಸಿರಗುಪ್ಪ ಕಡೆಗೆ ಹೋಗುವ ಮತ್ತು ಬರುವ ಮಧ್ಯಮ ಹಾಗೂ ಭಾರಿ ವಾಹನಗಳು ಬೆಂಗಳೂರು ರಸ್ತೆ ಬೈಪಾಸ್ ರೈಲ್ವೆಗೇಟ್, ಹೊಸಪೇಟೆ ರಸ್ತೆ ಬೈಪಾಸ್, ವಿನಾಯಕ ನಗರ ಸುಧಾಕ್ರಾಸ್, ಎಸ್ಪಿ ಸರ್ಕಲ್ ಮೂಲಕ ಸಾಗಬೇಕು. ಅಲ್ಲದೆ, ಮೋಕಾ, ಸಿರಗುಪ್ಪ ಹಾಗೂ ತಾಳೂರು ರಸ್ತೆಯಿಂದ ಹೋಗುವ ಹಾಗೂ ಬರುವ ವಾಹನಗಳಿಗೆ ಪರ್ಯಾಯ ರಸ್ತೆ ಕಲ್ಪಿಸಲಾಗಿತ್ತು. ದೇವಸ್ಥಾನ ಬಂದೋಬಸ್ತ್‌ಗಾಗಿ 600 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುಗುಮವಾಗಿ ದರ್ಶನ ಮಾಡಿಕೊಂಡು ಹೋಗಲು ಸಾಲು, ನೆರಳು, ಕುಡಿವ ನೀರಿನ ವ್ಯವಸ್ಥೆಯನ್ನು ಧಾರ್ಮಿಕ ಇಲಾಖೆಯಿಂದ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net