ಬಳ್ಳಾರಿ :ಇಸ್ಲಾಂ ಧರ್ಮದ ಪ್ರವರ್ತಕ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ಜಿಲ್ಲಾದ್ಯಂತ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಗುರುವಾರ ರಾತ್ರಿಯೇ ಹೆಚ್ಚಿನ ಮಸೀದಿಗಳಲ್ಲಿ ಮೌಲಾದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ನೀಡಲಾಯಿತು. ಹಬ್ಬದ ಪ್ರಯುಕ್ತ ನಗರ ಹಾಗೂ ಗ್ರಾಮೀಣ ಪ್ರದೇಶದ ಮಸೀದಿ, ದರ್ಗಾಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ನಡೆಯಿತು. ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಮೆರವಣಿಗೆ ನಡೆಯಿತು. ಇಲ್ಲಿನ ಕೌಲಬಜಾರ್ ಪ್ರದೇಶದಿಂದ ನಗರ ಪ್ರಮುಖ ವೃತ್ತಗಳ ಮೂಲಕ ಮೆರವಣಿಗೆ ಸಂಚರಿಸಿತು. ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಸಮುದಾಯದ ಜನರು ಭಾಗವಹಿಸಿದ್ದರು. ಮೆರವಣಿಗೆಯ ಉದ್ದಕ್ಕೂ ಸಮುದಾಯದ ಜನರು ಮಹಮ್ಮದ್ ಪೈಗಂಬರ್ ಜೀವನ ಸಂದೇಶ ಸಾರಿದರು. ಕೆಲವರು ಕುರಾನ್ ಪಠಣ ಮಾಡುತ್ತಾ ಸಾಗಿದರು. ಕೆಲ ಸಂಘ, ಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೂಂಡವರಿಗೆ ಶರಬತ್, ಮಜ್ಜಿಗೆ ವಿತರಿಸುವುದು ಕಂಡು ಬಂತು.
ದೇಶದ ಪ್ರಗತಿ ಹಾಗೂ ಎಲ್ಲ ಧರ್ಮದ ಜನರ ಶ್ರೇಯಸ್ಸಿಗಾಗಿ ಮಸೀದಿ ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ. ಇದೇ ವೇಳೆ ಸಮುದಾಯದ ಸ್ಥಿತಿವಂತರು ಬಡವರಿಗೆ ಆಹಾರ ಧಾನ್ಯ ಸೇರಿದಂತೆ ಅವಶ್ಯ ವಸ್ತುಗಳನ್ನು ದಾನ ಮಾಡಬೇಕು ಎಂದು ಧರ್ಮಗುರು ಹಜರತ್ ಹಿಮಾಮಿ ಫಾರೂಕ್ ಸಂದೇಶ ನೀಡಿದರು. ಮನೆಯಲ್ಲಿ ಕುಟುಂಬ ಸಮೇತ ಹೊಸ ಉಡುಪು ಧರಿಸಿ ಸಿಹಿ ತಿನಿಸು ಸೇವಿಸಿ ಸಂಭ್ರಮಿಸಿದರು.