ಎರಡು ವರ್ಷದಲ್ಲಿ 8,661 ದೂರುಗಳು ಇತ್ಯರ್ಥ

Published on

ಬಳ್ಳಾರಿ : ಕಳೆದ ಎರಡು ವರ್ಷದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿದ್ದ 8,661 ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದರು.

ಇಲ್ಲಿನ ನೂತನ ಡಿಸಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಕಳೆದ ಎರಡು ವರ್ಷದಲ್ಲಿ ಜಿಲ್ಲೆಯ ವಿವಿಧಡೆಯಿಂದ ಆಯೋಗಕ್ಕೆ ಒಟ್ಟು 11,211 ದೂರುಗಳು ದಾಖಲಾಗಿವೆ. ಈಗಾಗಲೇ ರಾಜ್ಯದ ಹದಿನೈದು ಜಿಲ್ಲೆಗಳಿಗೆ ಆಯೋಗವು ಭೇಟಿ ನೀಡಿ ಹಲವು ದೂರುಗಳು ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿಯೂ 27 ದೂರುಗಳು ವರದಿಯಾಗಿದ್ದು, ಇಪ್ಪತ್ತು ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಇನ್ನೂ ಏಳು ದೂರುಗಳಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಗೆಹರಿಸಲು ಸೂಚಿಸಲಾಗಿದೆ ಎಂದರು. ಆಯೋಗಕ್ಕೆ ಪೊಲೀಸ್ ಠಾಣೆಗಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನೂನ್ಯತೆ ಸೇರಿದಂತೆ ನಿತ್ಯ ಮೂವತ್ತಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗುತ್ತಿವೆ. ಆದ್ದರಿಂದ, ಠಾಣೆಯ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯ ಜಿಲ್ಲಾಸ್ಪತ್ರೆ, ಬಿಮ್ಸ್, ಕೇಂದ್ರ ಕಾರಾಗೃಹ,ನಿರಾಶ್ರಿತರ ಪರಿಹಾರ ಕೇಂದ್ರ ಸೇರಿದಂತೆ ವಿವಿಧಡೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಹಾಗೂ ಸಂಬಂಧಿಕರ ಜತೆ ಚರ್ಚಿಸಿದ್ದು ಸೇವೆಯಲ್ಲಿ ನೂನ್ಯತೆಗಳು ಕಂಡುಬಂದಿಲ್ಲ ಎಂಬುದಾಗಿ ಮಾಹಿತಿ ನೀಡಿದರು. ಮಾನವ ಹಕ್ಕುಗಳ ಆಯೋಗಕ್ಕೆ ದೂರುದಾರರೇ ದೂರು ನೀಡುವಂತಿಲ್ಲ . ಅವರ, ಪರವಾಗಿ ಯಾರೇ ನೀಡಿದರೂ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ನ್ಯಾಯಾಂಗ ಸದಸ್ಯ ಎಸ್.ಕೆ.ವೆಂಟಿಗೋಡಿ ಮಾತನಾಡಿ, ರಾಜ್ಯದಲ್ಲಿ ಆಯೋಗದ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದರ್ಪ ತೋರಿ ಹೆಸರು ದುರುಪಯೋಗಪಡಿಸಿಕೊಂಡರೆ ಅಂತಹವರ ಮೇಲೆ ಪೊಲೀಸ್ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು. ಎನ್‌ಜಿಒ ಸಂಸ್ಥೆಗಳು ಆಯೋಗದ ಹೆಸರಿನಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದರೆ ಅಂತಹವರ ಮೇಲೆ ಯಾವುದೆ ಕ್ರಮ ಇಲ್ಲ ಎಂದರು. ಜಿಲ್ಲೆಯಲ್ಲಿ ಅಂತಹ ಯಾವುದೇ ಹೆಸರಿನ ದುರುಪಯೋಗದ ಪ್ರಕರಣಗಳು ದಾಖಲಾಗಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net