ಬಳ್ಳಾರಿ : ರಾಜ್ಯ ಸರ್ಕಾರ ರಸ್ತೆ ಅಪಘಾತ ಪ್ರಕರಣಗಳು ತಗ್ಗಿಸಲು ಕಠಿಣ ನಿಯಮಗಳು ಜಾರಿಗೊಳಿಸಿ ದಂಡದ ಶುಲ್ಕ ಹೆಚ್ಚಿಸುತ್ತಿದೆ. ಆದರೆ, ಗಣಿನಾಡು ಜಿಲ್ಲೆಯಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಅಪಘಾತದಿಂದ ಸಾವಿನ ಸಂಖ್ಯೆಯು ಹೆಚ್ಚಳವಾಗಿದೆ. ಕಳೆದ ಮೂರವರೆ ವರ್ಷದಲ್ಲಿ ರಸ್ತೆ ಅಪಘಾತದಲ್ಲಿ 774 ಜನರು ಮೃತಪಟ್ಟಿದ್ದಾರೆ.
ಬೃಹತ್ ವಾಹನ ಚಾಲಕರ ಅತಿವೇಗ ಹಾಗೂ ಅಜಾಗೃತೆ, ಹೆಲ್ಮೆಟ್ ಧರಿಸದೆ ಬೈಕ್ ಸಂಚಾರ, ಕಿರಿದಾದ ಹಾಗೂ ಹದೆಗಟ್ಟ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು, ಪ್ರಮುಖ ರಸ್ತೆಗಳಲ್ಲಿ ನಿತ್ಯ ಸಂಚಾರ ದಟ್ಟಣೆ, ರಾಜ್ಯ ಹೆದ್ದಾರಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸಂಚಾರಿ ನಿಯಮ ಉಲ್ಲಂಘನೆ, ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಅಪಘಾತಗಳು ಜರುಗಿ ಅಮಾಯಕರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ದುರಸ್ತಿಗೊಳಿಸಿ ಕ್ರಮವಹಿಸಬೇಕಾದ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಮೈಮರೆತು ನಿರ್ಲಕ್ಷೃ ವಹಿಸಿದ್ದಾರೆ ಎನ್ನಲಾಗಿದೆ.
774 ಜನರ ಸಾವು : ಜಿಲ್ಲೆಯಲ್ಲಿ ಕಳೆದ ಮೂರವರೆ ವರ್ಷಗಳಲ್ಲಿ ಮೃತ ಹಾಗೂ ಗಾಯಗೊಂಡವರ ಸಂಖ್ಯೆ ಏರಿಕೆಯಲ್ಲಿದೆ. 2022 ರಲ್ಲಿ 226 ಜನರು ಮೃತಪಟ್ಟಿದ್ದು, 628 ಜನ ಗಾಯಗೊಂಡಿದ್ದಾರೆ. 2023ರಲ್ಲಿ 252 ಜನರು ಮೃತಪಟ್ಟಿದ್ದು 730 ಜನ ಗಾಯಗೊಂಡಿದ್ದಾರೆ. 2024ರಲ್ಲಿ 227 ಜನರು ಮೃತಪಟ್ಟಿದ್ದು 764 ಜನ ಗಾಯಗೊಂಡಿದ್ದಾರೆ. 2025ರ ಏಪ್ರೀಲ್ ಅಂತ್ಯದವರೆಗೆ 69 ಜನ ಮೃತಪಟ್ಟಿದ್ದು 200 ಜನ ಗಾಯಗೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 743 ಪ್ರಕರಣಗಳು ದಾಖಲಾಗಿದ್ದು 774 ಜನರು ಮೃತಪಟ್ಟಿದ್ದಾರೆ. ಅಲ್ಲದೆ, 2322 ಜನರಿಗೆ ಗಂಭೀರ ಗಾಯಗಳಿಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇದರಲ್ಲಿ ಕೆಲವರು ಶಾಶ್ವತವಾಗಿ ಕೈ, ಕಾಲು ಕಳೆದುಕೊಂಡು ಕುಟುಂಬದ ಆಧಾರದ ಮೇಲೆ ಬದುಕುಕಟ್ಟಿಕೊಂಡಿದ್ದಾರೆ. ಜಿಲ್ಲೆಯ ನಗರ ಹಾಗೂ ಸಂಡೂರು ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಸಂಡೂರಿನಲ್ಲಿ ವಿಪರೀತ ಅದಿರು ಸಾಗಣೆಯಿಂದ ವೇಗವಾಗಿ ಚಲಾಯಿಸುವುದರಿಂದ ವಾರದಲ್ಲಿ ಎರಡ್ಮೂರು ಅಪಘಾತಗಳು ನಡೆಯುತ್ತಿವೆ. ಈಚೆಗೆ ಸಂಡೂರು ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಅಲ್ಲದೆ, ನಗರದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರದಿಂದ ಅಪಘಾತ ಜರುಗುತ್ತಿವೆ. ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ನಗರದಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟಕ್ಕೆ ನಿಷೇಧ ಹಾಕಲಾಗಿದೆ. ಆದರೆ, ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಭಾರಿ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗಟ್ಟಿವೆ. ನಗರದ ಹೊರವಲಯದಲ್ಲಿ ರಿಂಗ್ ರೋಡ್ ಕಾಮಗಾರಿ ನಡೆಯುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆಗೆ ಕಡಿವಾಣ ಹಾಕಬಹುದು.
ಹೆಲ್ಮೆಟ್ ಅಭಿಯಾನ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದ್ದು, ಜನರನ್ನು ಸಾವಿನ ದವಡೆಯಿಂದ ಪಾರು ಮಾಲು ಜಿಲ್ಲಾ ಪೊಲೀಸ್ ಇಲಾಖೆ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಹೆಲ್ಮೆಟ್ ಇಲ್ಲದೆ ರಸ್ತೆಗಿಳಿಯುವವರಿಗೆ ದಂಡ ಪ್ರಯೋಗಕ್ಕೂ ಇಲಾಖೆ ಸಜ್ಜಾಗಿದೆ. ಆದರೆ, ಈಗಾಗಲೇ ಎರಡ್ಮೂರು ಬಾರಿ ಕಡ್ಡಾಯ ಹೆಲ್ಮೆಟ್ ಜಾರಿಗೊಳಿಸಿತ್ತು. ಆದರೆ, ದಂಡ ವಿಧಿಸುವ ವೇಳೆ ಪೊಲೀಸರ ಮೇಲೆ ಜನಪ್ರತಿನಿಧಿಗಳ ಹಾಗೂ ರಾಜಕೀಯ ಮುಖಂಡರ ಒತ್ತಡದಿಂದ ನಿಯಮಗಳನ್ನು ಸಡಿಲಗೊಳಿಸಿತು. ಸದ್ಯ ಜಾರಿ ಮಾಡಿರುವ ಕಡ್ಡಾಯ ಹೆಲ್ಮೆಟ್ ಅಭಿಯಾನ ಎಷ್ಟು ದಿನ ನಡೆಯಲಿದೆ ಎಂಬುದು ಕಾದು ನೋಡಬೇಕಿದೆ.
ಕೋಟ್... ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳು ತಗ್ಗಿಸಲು ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಜಾರಿಗೊಳಿಸಿದೆ. ರಸ್ತೆ ಅಪಘಾತಗಳು ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಿದೆ. ಸವಾರರು ಕೂಡ ಎಚ್ಚರಿಕೆಯಿಂದ ಸಂಚರಿಸಬೇಕು.
- ಡಾ.ವಿ.ಜೆ.ಶೋಭಾರಾಣಿ, ಎಸ್ಪಿ, ಬಳ್ಳಾರಿ.