ಮುಂಗಾರು ಶೇ. 70ರಷ್ಟು ಬೆಳೆ ಸಮೀಕ್ಷೆ ಪೂರ್ಣ

Published on

ಬಳ್ಳಾರಿ ; ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಸೌಲಭ್ಯ ಪಡೆಯುವ ಉದ್ದೇಶದಿಂದ ಕೃಷಿ ಇಲಾಖೆಯ ಕೆಲ ಅಧಿಕಾರಿಗಳ ಕುಮ್ಮುಕ್ಕನಿಂದ ಅಕ್ರಮವಾಗಿ ಬೆಳೆ ಸಮೀಕ್ಷೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾದ್ಯಂತ ಈ ಬಾರಿಯ ಬಿತ್ತನೆ ಗುರಿ 1,63,754 ಹೆಕ್ಟೇರ್ ಗುರಿ ನೀಡಲಾಗಿತ್ತು. ಆದರೆ, ಪ್ರಸ್ತಕ 1,70,460 (ಶೇ. 104.10 ರಷ್ಟು ) ಇದರೊಂದಿಗೆ ನಿರೀಕ್ಷೆ ಮೀರಿದ ಕೃಷಿ ಚಟುವಟಿಕೆ ನಡೆದಿದೆ. ಈಗಾಗಲೇ, ಕೃಷಿ ಇಲಾಖೆಯ ಅಧಿಕಾರಿಗಳು ಮುಂಗಾರು ಬಿತ್ತನೆ ಬೆಳೆ ಸಮೀಕ್ಷೆ ಆರಂಭಿಸಿದ್ದು ಶೇ. 70ರಷ್ಟು ಪೂರ್ಣಗೊಂಡಿದೆ. ಇನ್ನೂ ಈ ತಿಂಗಳ ಅಂತ್ಯದವರೆಗೆ ಸಮೀಕ್ಷೆ ನಡೆಯಲಿದ್ದು ಶೇ. ನೂರರಷ್ಟು ಪೂರ್ಣಗೊಳ್ಳಲಿದೆ. ಈಗಾಗಲೇ ಸೆಪ್ಟೆಂಬರ್ ತಿಂಗಳ ಆರಂಭದಿಂದ ಹಿಂಗಾರು ಹಂಗಾಮಿನ ಬಿತ್ತನೆ ಚುರುಕುಗೊಂಡಿದೆ. ಮುಂದಿನ ತಿಂಗಳ ಅಕ್ಟೋಬರ್ ತಿಂಗಳಿಂದ ಹಿಂಗಾರು ಬೆಳೆ ಸಮೀಕ್ಷೆ ನಡೆಯಲಿದೆ. ಆದರೆ, ಕೆಲ ನಕಲಿ ರೈತರು ಎಂಎಸ್‌ಪಿ ಸೌಲಭ್ಯ ಪಡೆಯುವ ಉದ್ದೇಶ ಸಲುವಾಗಿ ಹಿಂಗಾರಿನಲ್ಲಿ ಬಿತ್ತನೆಯಾದ ಬೆಳೆಗಳನ್ನು ಮುಂಗಾರು ಬೆಳೆಯಲ್ಲಿ ನೋಂದಯಿಸಿಕೊಂಡು ಎಂಎಸ್‌ಪಿ ಯೋಜನೆಯಡಿ ಧಾನ್ಯ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಹಿಂಗಾರಿನಲ್ಲಿ ಬೆಳೆದವರು ನಷ್ಟ ಹೊಂದುತ್ತಿದ್ದು ಕಡಿವಾಣ ಹಾಕಬೇಕು ಎಂಬ ಆಗ್ರಹ ರೈತರದಾಗಿದೆ.

ನಷ್ಟ ಹೊಂದಿದ ರೈತರು : ಕಳೆದ ಸಾಲಿನಲ್ಲಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಎರಡು ಲಕ್ಷ ಹಾಗೂ ಹಿಂಗಾರು ಒಂದು ಲಕ್ಷ ಸೇರಿ ಒಟ್ಟು ಮೂರು ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಸೂಚಿಸಿಲಾಗಿತ್ತು. ಅದರಂತೆ, ಒಬ್ಬರಿಂದ ಎಕರೆಗೆ 15 ಕ್ವಿಂಟಾಲ್‌ನಂತೆ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಾಲ್‌ಗೆ 3421 ರೂ. ಹಾಗೂ ಹೈಬ್ರಿಡ್ ಜೋಳ ಪ್ರತಿ ಕ್ವಿಂಟಾಲ್‌ಗೆ 3371 ರೂ. ಬೆಲೆಗೆ ಖರೀದಿಸಿತ್ತು. ಕಳೆದ ಸಾಲಿನಲ್ಲಿ ಹಿಂಗಾರಿನಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ಕೆಲವರು ಅಧಿಕಾರಿಗಳ ಬೆಂಬಲದಿಂದ ಅಕ್ರಮವಾಗಿ ಮುಂಗಾರಿನಲ್ಲಿ ನೋಂದಯಿಸಿಕೊಂಡ ಪರಿಣಾಮ ಗುರಿ ಪೂರ್ಣಗೊಂಡಿತು. ಇದರಿಂದ ಜಿಲ್ಲೆಯ ನೂರರು ರೈತರು ಹಲವು ತಿಂಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ಕ್ವಿಂಟಾಲ್‌ನಷ್ಟು ಜೋಳವನ್ನು ದಲ್ಲಾಳಿಗಳ ಮೂಲಕ ಎರಡು ಸಾವಿರ ದಿಂದ 2200 ರೂ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕ್ವಿಂಟಾಲ್‌ಗೆ ಸಾವಿರ ರೂ. ಕ್ಕಿಂತ ಅಧಿಕ ನಷ್ಟ ಹೊಂದಿದರು. ಈ ಬಾರಿ ಎಂಎಸ್‌ಪಿಯಡಿ ಧಾನ್ಯಗಳ ಬೆಲೆ ಏರಿಕೆಗೊಂಡಿದೆ. ಹೀಗಾಗಿ, ಕೆಲವೊಂದು ಪಾಳು ಬಿದ್ದ ಭೂಮಿ ಹಾಗೂ ಖರೀದಿ ಕೇಂದ್ರದಲ್ಲಿ ಮಾರಾಟಗೊಳ್ಳದ ಬೆಳೆಗಳನ್ನು ಕೂಡ ರಾಗಿ, ಭತ್ತ, ಜೋಳ ಎಂಬುದಾಗಿ ಬೆಳೆ ಸಮೀಕ್ಷೆಯಲ್ಲಿ ನಮೂದಿಸಿ ಎಂಎಸ್‌ಪಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಹೀಗಾಗಿ ಇದರಲ್ಲಿ ಅಧಿಕಾರಿಗಳು ಶಾಮೀಲು ಆಗದೆ ನಿಪಕ್ಷಪಾತವಾಗಿ ನಡೆಯಬೇಕು. ಈ ಬಾರಿ ಮುಂಗಾರು ಹಂಗಾಮಿನ ಬೆಳೆ ಮಾರಾಟಕ್ಕೆ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ತೆರೆಯಬೇಕು ಎಂಬ ಆಗ್ರಹವಿದೆ.

ಕೋಟ್.. ಕಳೆದ ಸಾಲಿನಲ್ಲಿ ಅಕ್ರಮ ಬೆಳೆ ಸಮೀಕ್ಷೆಯಿಂದ ನೂರರು ರೈತರು ನಷ್ಟ ಹೊಂದಿದರು. ಈ ಬಾರಿ ನಿಪಕ್ಷಪಾತವಾಗಿ ಬೆಳೆ ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

- ಪಿ.ರಾಘವೇಂದ್ರರೆಡ್ಡಿ, ರೈತ, ತಾಳೂರು.

ಕೋಟ್... ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಶೇ.70ರಷ್ಟು ಪೂರ್ಣಗೊಂಡಿದೆ. ಅಕ್ರಮ ಸಮೀಕ್ಷೆ ನಡೆಯದಂತೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂಗಾರು ಸಮೀಕ್ಷೆ ಪೂರ್ಣಗೊಂಡ ನಂತರ ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದು ಅಕ್ರಮ ಕಂಡು ಬಂದರೆ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲಾಗುವುದು.

- ಎಂ.ಸೋಮಸುಂದರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net