ಬಳ್ಳಾರಿ : ಸರ್ಕಾರ ವರ್ಷದಿಂದ ವರ್ಷಕ್ಕೆ ವಿವಿಧ ಯೋಜನೆಗಳ ಮೂಲಕ ಆರೋಗ್ಯ ಇಲಾಖೆ ಸುಧಾರಿಸಲು ಕ್ರಮವಹಿಸಿತ್ತಿದ್ದರೂ ಬಾಣಂತಿಯರ ಸಾವು ಮಾತ್ರ ಕಡಿಮೆಯಾಗುತ್ತಿಲ್ಲ.
ಜಿಲ್ಲೆಯ ಬಿಮ್ಸ್, ಜಿಲ್ಲಾಸ್ಪತ್ರೆ, ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದ ಬಾಣಂತಿಯರು ಮೃತಪಟ್ಟಿದ್ದಾರೆ. ತಾಯಿ ಕಳೆದುಕೊಂಡು ನವಜಾತು ಶಿಶುಗಳ ಆರೈಕೆಗೆ ಮೃತ ಕುಟುಂಬಸ್ಥರು ಸಂಕಷ್ಟ ಪಡುವಂತೆಯಾಗಿದೆ. ಅಲ್ಲದೆ, ಇತ್ತೀಚೆಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ ಸರಣಿ ಬಾಣಂತಿಯರ ಸಾವಿನಿಂದ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಕೆಲ ತಿಂಗಳಿಂದ ಖಾಸಗಿ ಆಸ್ಪತ್ರೆಯ ಆಸಕ್ತಿ ತೊರೆದು ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಆಗಮಿಸುತ್ತಿದ್ದ ಜನರಿಗೆ ಈ ಬಾಣಂತಿಯರ ಸಾವಿನಿಂದ ಅತಂಕಕ್ಕೆ ಒಳಗಾಗಿದ್ದಾರೆ.
44 ಬಾಣಂತಿಯರು ಮೃತ : ಜಿಲ್ಲೆಯಲ್ಲಿ ಕಳೆದ ಹತ್ತೊಂಬತ್ತು ತಿಂಗಳಲ್ಲಿ 44 ಬಾಣಂತಿಯರು ಮೃತಪಟ್ಟಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಬಾಣಂತಿಯರು ಮೃತಪಟ್ಟಿರುವುದು ಗಮರ್ನಾಹವಾಗಿದೆ. ಹೆರಿಗೆಯಾದ ಬಳಿಕ ತೀವ್ರ ರಕ್ತಸ್ರಾವ, ಹೈ ಬಿಪಿ, ವಿವಿಧ ಕಾಯಿಲೆಗಳು, ಆರೋಗ್ಯದ ಬಗ್ಗೆ ಗಮನಹರಿಸದೆ ಇರುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಒದಗಿಸಿ ಆರೈಕೆ ನೀಡಬೇಕಿದ್ದ ಆರೋಗ್ಯ ಇಲಾಖೆಯು ಕೂಡ ಸಾಕಷ್ಟು ಸುಧಾರಿಸಬೇಕಿದೆ. ಗರ್ಭಿಣಿಯರ ಆರೋಗ್ಯದ ಕಾಳಜಿ ವಹಿಸಲು ಗ್ರಾಪಂ ವಾರು ಆಶಾ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಆದರೆ, ಒಂದೂಂದು ಗ್ರಾಪಂ ಮಟ್ಟದಲ್ಲಿ ಮೂವತ್ತರಿಂದ ನಾಲವತ್ತು ಅಧಿಕ ಗರ್ಭಿಣಿಯರ ಆರೈಕೆಗೆ ಒಬ್ಬರೇ ಆಶಾ ಕಾರ್ಯಕರ್ತೆಯರಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಲಕರಣೆಗಳು ಹಾಗೂ ವೈದ್ಯರ ಕೊರತೆ ಕಾಡುತ್ತಿದೆ. ಜಿಲ್ಲೆಯ ಹಲವು ಗ್ರಾಮಗಳ ಗರ್ಭಿಣಿಯರು ಹೆರಿಗೆಗಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕಾದ ಅನಿವಾರ್ಯತೆಯಿದೆ. ಹೆರಿಗೆ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಿ ಬಳಿಕ ತೀವ್ರ ಆರೋಗ್ಯದಲ್ಲಿ ಏರುಪೇರಾದ ವೇಳೆ ಜಿಲ್ಲಾಸ್ಪತ್ರೆಗಳಿಗೆ ಸ್ಥಳಾಂತರಿಸುವುದು ಸಾಮಾನ್ಯವಾಗಿದೆ. ಉದಾಹರಣೆಗೆ ಇತ್ತೀಚೆಗೆ ಕಳೆದ ಕೆಲ ದಿನಗಳ ಹಿಂದೆ ವಿಜಯನಗರ ಜಿಲ್ಲೆಯ ಮಹಾಲಕ್ಷ್ಮಿ ಎಂಬ ಗರ್ಭಿಣಿಯು ಹೆರಿಗೆಗಾಗಿ ಕೂಡ್ಲಿಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸದ್ದರಿಂದ ನಗರದ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರು ದಿನ ಹೆರಿಗೆಯಾದ ಬಳಿಕ ತೀವ್ರ ರಕ್ತ ಸ್ರಾವ, ಅನಿಮಿಯಾ ಕಾಯಿಲೆಯಿಂದ ಮೃತಪಟ್ಟರು. ಕೂಡ್ಲಿಗಿಯಿಂದ ಬಿಮ್ಸ್ ಗೆ ಆಗಮಿಸುವ ವೇಳೆ ಆರೋಗ್ಯದಲ್ಲಿ ತೀವ್ರ ಏರುಪೇರಾನಿಂದ ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಕೂಡ್ಲಿಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಎಲ್ಲ ವೈದ್ಯಕೀಯ ಸೌಲಭ್ಯಗಳು ದೊರೆತಿದ್ದರೆ ಮಹಾಲಕ್ಷ್ಮೀ ಬದುಕು ಉಳಿಯುತ್ತಿದ್ದಳು ಎಂದು ಕುಟುಂಬಸ್ಥರು ಸರ್ಕಾರದ ವಿರುದ್ದ ಹಿಡಿ ಶಾಪಹಾಕಿದರು. ಇದರಂತೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭದಲ್ಲಿಯೇ ಗರ್ಭಿಣಿಯರನ್ನು ದಾಖಲಿಸಿಕೊಂಡು ಕೈ ಮೀರಿದ ಮೇಲೆ ಜಿಲ್ಲೆಯ ಆಸ್ಪತ್ರೆಗಳ ಕಳುಹಿಸುವುದು ಸಾಮಾನ್ಯವಾಗಿದೆ. ಮೊದಲೇ ಪ್ರತಿಯೊಂದು ತಾಲೂಕು ಕೇಂದ್ರಗಳಿಗೆ ಸೂಕ್ತ ಸೌಲಭ್ಯ ಒದಗಿಸಿದರೆ ಬಾಣಂತಿಯರ ಮರಣ ತಗ್ಗಿಸಬಹುದು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಈಗಾಲೂದರೂ ಸರ್ಕಾರ ಎಚ್ಚೇತ್ತುಕೊಂಡ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ನೀಗಿಸಿ ಹಾಗೂ ಮೂಲ ಸೌಲಭ್ಯ ಒದಗಿಸುವಲ್ಲಿ ಮುಂದಾಗಬೇಕು.
1372 ನವಜಾತು ಶಿಶು ಮೃತ : ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಅವಧಿ ಮುನ್ನ ಜನನ, ಪೌಷ್ಠಿಕಾಂಶ ಕೊರತೆ ಸೇರಿದಂತೆ ಒಟ್ಟಾರೆ 1372 ನವಜಾತು ಶಿಶುಗಳು ಮೃತಪಟ್ಟಿವೆ. 2021 ರಲ್ಲಿ 457, 2022 ರಲ್ಲಿ 387, 2023 ರಲ್ಲಿ 322 ಹಾಗೂ ಕಳೆದ ಏಪ್ರಿಲ್ ನಿಂದ ಈವರೆಗೂ 206 ನವಜಾತ ಶಿಶುಗಳು ಮೃತಪಟ್ಟಿವೆ. ಅದೆಷ್ಟೂ ವರ್ಷಗಳ ಬಳಿಕ ದಂಪತಿಗೆ ಜನಿಸಿದ ಶಿಶುಗಳ ಮೃತಪಟ್ಟ ವೇಳೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಜಿಲ್ಲಾ ಆರೋಗ್ಯ ಇಲಾಖೆ ಗರ್ಭಿಣಿಯರ ಆರೈಕೆಯಲ್ಲಿ ಸರ್ಕಾರ ಕ್ರಮವಹಿಸಬೇಕಿದೆ.
ಕೋಟ್.. ಜಿಲ್ಲೆಯಲ್ಲಿ ಬಾಣಂತಿಯರ ಸಾವಿನಿಂದ ಆರೋಗ್ಯ ಇಲಾಖೆ ಎಚ್ಚೇತ್ತುಕೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಜಿಲ್ಲಾಸ್ಪತ್ರೆ ಬಹಳಷ್ಟು ಬದಲಾವಣೆಯಾಗಲಿದೆ.
- ಡಾ.ವೈ.ರಮೇಶಬಾಬು, ಡಿಎಚ್‌ಒ, ಬಳ್ಳಾರಿ.
=====