ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

Published on

ಬಳ್ಳಾರಿ : ರಾಜ್ಯಾದ್ಯಂತ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ಮಾ.1ರಿಂದ 20ರವರೆಗೆ ನಡೆಯಲಿದ್ದು, ಅಖಂಡ ಜಿಲ್ಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.

ಈ ಬಾರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 30,434 ಜನರು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ರೆಗ್ಯುಲರ್ 27,095 ವಿದ್ಯಾರ್ಥಿಗಳು, 985 ಖಾಸಗಿ ಹಾಗೂ 2,354 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಎದುರಿಸುವರು. ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 9,859 ಜನರು ಕಲಾ, ವಾಣಿಜ್ಯ 6,759 ಹಾಗೂ ವಿಜ್ಞಾನ ವಿಭಾಗದ 10,477 ಪರೀಕ್ಷೆ ಬರೆಯುವರು. 15,538 ವಿದ್ಯಾರ್ಥಿನಿಯರು, 14,896 ವಿದ್ಯಾರ್ಥಿಗಳಿದ್ದಾರೆ.

43 ಪರೀಕ್ಷಾ ಕೇಂದ್ರ: 43 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಬಳ್ಳಾರಿಯಲ್ಲಿ 20 ಹಾಗೂ ವಿಜಯನಗರದಲ್ಲಿ 23 ಕೇಂದ್ರಗಳಿವೆ. ಸಿರುಗುಪ್ಪ , ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಲಾ ಮೂರು, ಸಂಡೂರು, ಕಂಪ್ಲಿ , ಕೂಡ್ಲಿಗಿ ತಲಾ ಎರಡು, ಕುರುಗೋಡು, ಮರಿಯಮ್ಮನಹಳ್ಳಿ ತಲಾ ಒಂದು, ಹರಪನಹಳ್ಳಿ ಐದು, ಹೊಸಪೇಟೆ ಆರು ಹಾಗೂ ಬಳ್ಳಾರಿಯಯಲ್ಲಿ 12 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಖಂಡ ಜಿಲ್ಲೆಯಲ್ಲಿ ಒಟ್ಟು 172 ಪದವಿ ಪೂರ್ವ ಕಾಲೇಜುಗಳಿದ್ದು, ಬಳ್ಳಾರಿ 81 ಹಾಗೂ ವಿಜಯನಗರ ಜಿಲ್ಲೆಯಲ್ಲಿ 91 ಇವೆ. ಈ ಪೈಕಿ ಉಭಯ ಜಿಲ್ಲೆಗಳಲ್ಲಿ 48 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಬಳ್ಳಾರಿ 20 ಹಾಗೂ ವಿಜಯನಗರ ಜಿಲ್ಲೆಯಲ್ಲಿ 28 ಸರ್ಕಾರಿ ಕಾಲೇಜುಗಳಿವೆ. ಉಳಿದಂತೆ ಎರಡು ಜಿಲ್ಲೆಯಲ್ಲಿ ಒಟ್ಟು 124 ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿವೆ.

ನಿಷೇಧ : ಪರೀಕ್ಷಾರ್ಥಿಗಳು ರಿಸ್ಟ್ ವಾಚ್ ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರು ಹೊರತುಪಡಿಸಿ, ಯಾವೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ. ನಕಲಿ ಪ್ರಶ್ನೆಪತ್ರಿಕೆ ಫೋಟೋ ತೆಗೆದು ವಾಟ್ಸ್‌ಆ್ಯಪ್ ಮೂಲಕ ಕಳಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಲು ಪೊಲೀಸ್ ಇಲಾಖೆ ಮುಂದಾಗಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net