ಶಿವಶರಣರು ತಮ್ಮೊಳಗೆ ದೇವರನ್ನು ಕಂಡವರು ಎಂದು ಕನ್ನಡ ಸಹಪ್ರಾಧ್ಯಾಪಕಿ ಡಾ.ಕಲಾವತಿ

BLY-14-2
Published on

ಬಳ್ಳಾರಿ: ಶರಣರು ದೇವರನ್ನು ಕಲ್ಲು, ಮಣ್ಣು, ಲೋಹಗಳಲ್ಲಿ ಕಾಣಲಿಲ್ಲ. ತಮ್ಮೊಳಗೆ ತಾವೇ ದೈವವನ್ನು ದರ್ಶಿಸಿದರು ಎಂದು ಮೋಕಾ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕಲಾವತಿ ನುಡಿದರು.

ಗಾಂಧಿನಗರದಲ್ಲಿರುವ ಶ್ರೀ ಗುರು ತಿಪ್ಪೇರುದ್ರ ಪ್ರೌಢಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 278ನೇ ಮಹಾಮನೆ ಲಿಂ.ಬಸಯ್ಯ ವೀರಭದ್ರಯ್ಯ ಹೊಸೂರ್‌ಮಠ ದತ್ತಿ, ಲಿಂ.ಕೊಟ್ರಯ್ಯ ವೀರಭದ್ರಯ್ಯ ಹೊಸೂರ್‌ಮಠ ದತ್ತಿ, ಲಿಂ. ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಲಿಂ.ಕೆ.ಬಿ ಹನುಮಂತರಾಯ ದತ್ತಿ ಕಾರ್ಯಕ್ರಮದಲ್ಲಿ ‘ಶರಣರ ಕಲ್ಪನೆಯಲ್ಲಿ ಪೂಜೆ’ ಎಂಬ ವಿಷಯ ಕುರಿತು ಮಾತನಾಡಿದರು.

ದೇಹವನ್ನು ದೇವಾಲಯದಂತೆ ಪವಿತ್ರೀಕರಿಸಿಕೊಂಡು, ಮಾನಸಿಕ ಶುದ್ಧತೆಯನ್ನು ಕಾಯ್ದುಕೊಳ್ಳುವುದೆ ನಿಜವಾದ ಪೂಜೆ. ಕೊಡು-ಕೊಳ್ಳುವ ವ್ಯವಹಾರ ಪೂಜೆಯಲ್ಲ. ಮಾನವ ತನ್ನ ಬೇಡಿಕೆಗಳನ್ನು ಹೊಂದಲು ಮಾರುಕಟ್ಟೆಗೆ ತೆರಳುವಂತೆ ಮಹತ್ತರಗಳಿಗೆ, ಲಾಭಗಳಿಗಾಗಿ ಗುಡಿಗಳಿಗೆ ತೆರಳುತ್ತಾನೆ. ಅಲ್ಪ ಕಾಣಿಕೆಯನ್ನು ದೇವರಿಗೆ ನೀಡಿ ಕ್ಷಮೆ ಕೋರುತ್ತಾನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗುರು ತಿಪ್ಪೇರುದ್ರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಎನ್.ರುದ್ರಪ್ಪ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೇ ಪೂಜೆಯಾಗಬೇಕು. ನೀವು ಓದದೇ ದೇವರಲ್ಲಿ ಉತ್ತೀರ್ಣನನ್ನಾಗಿಸು ಎಂದು ಬೇಡಿದರೆ ದೇವರು ಓದಿ ಪರೀಕ್ಷೆ ಬರೆಯುವನೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಶರಣರು ತಿಳಿಸಿದಂತೆ ಕಾಯಕವೇ ಪೂಜೆಯಾಗಬೇಕು. ಕಾಯಕದಲ್ಲಿಯೇ ದೇವರನ್ನು ಕಾಣಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಸಾಧನೆಯನ್ನು ಪ್ರದರ್ಶಿಸಿ ದೇವರ ಒಲುಮೆಯನ್ನು ಪಡೆಯಬೇಕು. ದೇವಾಲಯ ಪುಣ್ಯಕ್ಷೇತ್ರ ಮುಂತಾದವುಗಳನ್ನು ಸುತ್ತಿ ಅಲೆಯುವುದಲ್ಲ ಎಂದರು.
ವಿದ್ಯಾರ್ಥಿನಿ ಚಿನ್ಮಯಿ ವಚನ ಪ್ರಾರ್ಥನೆ ಮಾಡಿದರು,. ಶಿಕ್ಷಕಿ ಸೌಮ್ಯಾ ಸ್ವಾಗತಿಸಿ, ನಿರ್ವಹಿಸಿದರು. ಪರಿಷತ್ ಅಧ್ಯಕ್ಷ ಕೆ.ಬಿ ಸಿದ್ದಲಿಂಗಪ್ಪ ದತ್ತಿ ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಾಲೆಯ ನಿರ್ದೇಶಕಿ ಮಂಜುಳಾ, ಮುಖ್ಯ ಶಿಕ್ಷಕ ಇಲಿಯಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net