ಬಳ್ಳಾರಿ : ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಪಡಿತರ ಕಾರ್ಡುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಥಗಿತಗೊಳಿಸಿ, ಈಗಾಗಲೇ ಅನರ್ಹಗೊಳಿಸಿದ್ದ 2,026 ಅರ್ಹ ಪಡಿತರ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ.
ರಾಜ್ಯ ಸರ್ಕಾರ ಕುಟುಂಬ ತಂತ್ರಾಂಶದಡಿ ರಾಜ್ಯಾದ್ಯಾಂತ ಅದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಹಾಗೂ 1.20 ಲಕ್ಷಕ್ಕೂ ಮೀರಿದ ಅದಾಯ ಹೊಂದಿರುವ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲದ ಕುಟುಂಬಗಳಿಗೆ ರದ್ದು ಮಾಡುವ ಪ್ರಕ್ರಿಯೆ ನಡೆಸಲಾಗಿತ್ತು. ರಾಜ್ಯಾದ್ಯಾಂತ ತೀವ್ರ ಗೊಂದಲ ಉಂಟಾಗಿದ್ದರಿಂದ ಸರ್ಕಾರ ರದ್ದು ಮಾಡುವ ಪ್ರಕ್ರಿಯೆ ತಡೆಯೊಡ್ಡಿದೆ.
ಜಿಲ್ಲೆಯಲ್ಲಿ ಒಟ್ಟು 14,976 ಪಡಿತರ ಕಾರ್ಡ್‌ಗಳು ಇದ್ದು ಆರಂಭದಲ್ಲಿ ತಾಲೂಕುವಾರು ರದ್ದು ಪ್ರಕ್ರಿಯೆಗೆ ಮುಂದಾಗಿತ್ತು. ಅದರಂತೆ, ಬಳ್ಳಾರಿ ತಾಲೂಕಿನಲ್ಲಿ 6392 ಪೈಕಿ 982, ಬಳ್ಳಾರಿ ಗ್ರಾಮೀಣ 2092 ಪೈಕಿ 231, ಕಂಪ್ಲಿ 1,375 ಪೈಕಿ 216, ಕುರುಗೋಡು - 423 ಪೈಕಿ 89, ಸಂಡೂರು -3004 ಪೈಕಿ 266, ಸಿರಗುಪ್ಪ 1690 ಪೈಕಿ 242 ಸೇರಿದಂತೆ ಒಟ್ಟಾರೆ 2,026 ರದ್ದುಗೊಳಿಸಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಮತ್ತೋಮ್ಮೆ ಚಾಲ್ತಿಗೊಳಿಸಲಾಗಿದೆ.
7,488 ಸಕ್ರಿಯ ಕಾರ್ಡ್ : ಜಿಲ್ಲೆಯಲ್ಲಿ 7488 ಕಾರ್ಡ್‌ದಾರರು ಅಂದಾಜು ಆರು ತಿಂಗಳಿಂದ ಪಡಿತರವನ್ನೇ ಪಡೆದುಕೊಂಡಿಲ್ಲ. ಇಂಥ ಕಾರ್ಡ್‌ಗಳನ್ನು ಸರ್ಕಾರ ಅಮಾನತು ಆದೇಶ ಹೊರಡಿಸಿತ್ತು. ದೀರ್ಘ ಕಾಲದ ವರೆಗೆ ಪಡಿತರವನ್ನೇ ಪಡೆಯದವರು ಸೂಕ್ತ ದಾಖಲೆ, ಸಮಜಾಯಿಷಿ ನೀಡಿ ಪಡಿತರ ಪಡೆಯಬಹುದು ಎಂಬುದಾಗಿ ತಿಳಿಸಿತ್ತು. ಆದರೆ, ಈ ಎಲ್ಲ ಕಾರ್ಡ್‌ಗಳನ್ನು ಪರಿಶೀಲಿಸಿ ಸಕ್ರಿಯಗೊಳಿಸಿ ಎಂಬುದಾಗಿ ಇಲಾಖೆಗೆ ಸರ್ಕಾರ ಸೂಚಿಸಿದೆ. ಅಲ್ಲದೆ, 2021- 24ರ ನಡುವಿನ ಅವಧಿಯಲ್ಲಿ ಅರ್ಹತೆ ಇಲ್ಲದ 2,813 ಜನರ ಬಳಿ ಬಿಪಿಎಲ್ ಕಾರ್ಡ್‌ಗಳಿದ್ದವು. ಅಂಥವರಿಗೆ ದಂಡ ವಿಧಿಸಿ ಇಲಾಖೆಯು ಒಟ್ಟಾರೆ 2.34 ಲಕ್ಷ ರೂ. ಸಂಗ್ರಹಿಸಿದೆ. ಜಿಲ್ಲೆಯಲ್ಲಿ ಮೃತರ ಹೆಸರಲ್ಲಿದ್ದ 3,576 ಕಾರ್ಡ್‌ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಗೊಳಿಸಿದೆ. ಬಳ್ಳಾರಿ ತಾಲೂಕಿನಲ್ಲಿಯೇ 1,556 ಕಾರ್ಡಗಳು ಮೃತರ ಹೆಸರಲ್ಲಿದ್ದವು. ಕಂಪ್ಲಿ 341, ಕುರುಗೋಡು 282, ಸಂಡೂರು - 589, ಸಿರುಗುಪ್ಪದಲ್ಲಿ 808 ಕಾರ್ಡ್‌ಗಳು ರದ್ದಾಗಿವೆ. ಇನ್ನೊಂದೆಡೆ, ಸರ್ಕಾರಿ ನೌಕರಿ ಪಡೆದವರು ಜಿಲ್ಲೆಯಲ್ಲಿ 71 ಕುಟುಂಬಗಳಿದ್ದು ಆ ಎಲ್ಲ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಇನ್ನೂ, ಜಿಲ್ಲೆಯಲ್ಲಿ ಸರ್ಕಾರಿ ನೌಕರಿ ಹೊಂದಿ ಬಿಪಿಎಲ್ ಹೊಂದಿದ ಕುಟುಂಬಗಳಿವೆ. ಆದ್ದರಿಂದ, ಸರ್ಕಾರಿ ನೌಕರರಿಗೆ ವೇತನ ಬಿಡುಗಡೆಗೊಳಿಸುವ ಎಚ್‌ಆರ್‌ಎಂಎಸ್ ಮಾಹಿತಿ ಮೂಲಕ ಪರಿಶೀಲಿಸಲಾಗುತ್ತಿದ್ದು ಅಂತಹ ಕಂಡು ಬಂದರೆ ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ.
ಈ ಶ್ರಮ ಫಲಾನುಭವಿಗಳಿಗೆ ಕಾರ್ಡ್ ವಿತರಣೆ : ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಈ ಶ್ರಮ್ ಕಾರ್ಡ್ ಹೊಂದಿದವರಿಗೂ ಕೂಡ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಸಂಡೂರು ಭಾಗದ ಕೆಲವರಿಗೆ ನೀಡಲಾಗಿದೆ. ಅಲ್ಲದೆ, ಬೇರೆ ರಾಜ್ಯದಿಂದ ಜಿಂದಾಲ್‌ಗೆ ವಲಸೆ ಬಂದಿರುವ ನೂರರು ಕಾರ್ಮಿಕರು ಕಳೆದ ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದು ಆಧಾರ್ ಕಾರ್ಡ್ ಹಾಗೂ ಅದಾಯ ಪ್ರಮಾಣ ಪತ್ರ ಕರ್ನಾಟಕದ್ದು ಪಡೆದರೆ ಮಾತ್ರ ಅಂತಹವರಿಗೆ ಈ ಶ್ರಮ್ ಕಾರ್ಡ್ ಮೂಲಕ ಬಿಪಿಎಲ್ ವಿತರಿಸಲಾಗುವುದು. ಆದರೆ, ಈ ಶ್ರಮ್ ಕಾರ್ಡ್ ಹೊಂದಿ ಅನ್ಯ ರಾಜ್ಯದ ದಾಖಲೆಗಳು ಹೊಂದಿದ್ದರೆ ಅಂತಹವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಕೋಟ್... ಸರ್ಕಾರದ ನಿಯಮದಂತೆ ಕೆಲ ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಅನರ್ಹಗೊಳಿಸಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಅರ್ಹ ಪಡಿತರವಾಗಿ ಪರಿವರ್ತಿಸಲಾಗಿದೆ. ಇನ್ನೂ ಉಳಿದ ಕಾರ್ಡ್‌ಗಳನ್ನು ಪರಿಶೀಲಿಸಿ ಅರ್ಹಗೊಳಿಸಲಾಗುವುದು.
- ಸಕೀನ, ಉಪನಿರ್ದೇಶಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ,ಬಳ್ಳಾರಿ.
===