ಕನ್ನಡಿಗರಿಗೆ ಅಪಮಾನಿಸಿಲ್ಲ

Published on

ಬಳ್ಳಾರಿ : ತೆಲುಗಿನ ಅಲ್ಲು ಅರ್ಜುನ ನಟನೆಯ ಪುಷ್ಪಾ -2 ಚಿತ್ರದ ವಿತರಕನಾಗಿಯಶಸ್ಸು ಬಯಸಿದ್ದೆ ಹೊರತು, ಯಶ್ ನಟನೆಯ ಕೆಜಿಎಫ್ ಸರಣಿಯ ಚಿತ್ರಗಳು ಹಾಗೂ ಕನ್ನಡಿಗರಿಗೆ ಅಪಮಾನಿಸಿಲ್ಲ ಎಂದು ನಟರಾಜ್ ಚಿತ್ರಮಂದಿರದ ಮಾಲೀಕ ಹಾಗೂ ಪುಷ್ಪಾ -2 ಸಿನಿಮಾ ವಿತರಕ ಲಕ್ಷ್ಮೀಕಾಂತರೆಡ್ಡಿ ಸ್ಪಷ್ಟನೆ ನೀಡಿದರು.

ನಗರದ ನಟರಾಜ ಚಿತ್ರಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುಷ್ಪ -2 ಸಿನಿಮಾದ ಅಖಿಲ ಕರ್ನಾಟಕ ವಿತರಣೆಯನ್ನು ನಾನೇ ಪಡೆದುಕೊಂಡಿರುವೆ. ಆದ್ದರಿಂದ, ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಪುಷ್ಪಾ -2 ಚಿತ್ರದ ವಿತರಕರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದಲ್ಲಿ ಕೆಜಿಎಫ್ ಸಿನಿಮಾದ ಮೊದಲ ದಿನದ ದಾಖಲೆಯನ್ನು ಮೀರಿ ಯಶಸ್ಸು ಗಳಿಸಲಿ ಎಂದು ವ್ಯವಹಾರದ ದೃಷ್ಠಿಯಿಂದ ಹೇಳಿದ್ದೆ. ಇದರಲ್ಲಿ ತಪ್ಪು ಹುಡುಕಿರುವ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಸೃಷ್ಠಿ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರಗಳ ಬಗ್ಗೆ ಅಗೌರವವಾಗಿ ಎಲ್ಲಿಯೂ ಮಾತನಾಡಿಲ್ಲ. ಯಶ್ ಸೇರಿದಂತೆ ಹಲವು ಕನ್ನಡ ನಟರ ಸಿನಿಮಾಗಳನ್ನು ತೆಲುಗಿನಲ್ಲಿ ನಾನೇ ವಿತರಣೆ ಮಾಡಿರುವೆ. ನಗರದ ನಟರಾಜ ಚಿತ್ರಮಂದಿರಗಳಲ್ಲಿ ಕನ್ನಡಕ್ಕೆ ಅದ್ಯತೆ ನೀಡಿದ್ದೇನೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ದೇಶದ ಚಿತ್ರರಂಗದಲ್ಲಿ ಪಾರಮ್ಯ ಮೆರೆಯುತ್ತಿವೆ. ಮೊದಲಿಗೆ ಬಾಹುಬಲಿ ಯಶಸ್ಸು ಕಂಡಿತು. ಬಳಿಕ ಅದರ ದಾಖಲೆಯನ್ನು ಯಾರು ಮುರಿಯಲಾಗದು ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟರು. ಆದರೆ, ಕೆಲ ತಿಂಗಳಲ್ಲಿಯೇ ಬಿಡುಗಡೆಯಾದ ಕೆಜಿಎಫ್ ಎಲ್ಲ ದಾಖಲೆಗಳನ್ನು ಮುರಿಯಿತು. ಅದರಂತೆ ಕನ್ನಡದ ಕಾಂತಾರ ಚಿತ್ರ ಮತ್ತೊಂದು ಹಂತ ಮೇಲೇರಿತು. ಪುಷ್ಪ -2 ಕೂಡ ಪ್ಯಾನ್ ಇಂಡಿಯಾ ಚಿತ್ರ. ಅದು ದಾಖಲೆಗಳನ್ನು ಮೀರಲಿ ಎಂಬುದರಲ್ಲಿ ತಪ್ಪಿಲ್ಲ.ದೇಶಾದ್ಯಂತ ಪ್ಯಾನ್ ಇಂಡಿಯಾ ಚಿತ್ರವಾಗಿ ವಿವಿಧ ಭಾಷೆಗಳಲ್ಲಿ ಪುಷ್ಪಾ -2 ಡಿ.5ರಂದು ಬಿಡುಗಡೆಯಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net