ಬಳ್ಳಾರಿ : ಮಹಿಳೆಯರು ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು. ಸಾಧನೆಯ ಗುರಿ ತಲುಪುವ ತನಕ ಛಲವನ್ನು ಬಿಡಬಾರದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ (ಡಯಟ್) ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಯೂತ್ ರೆಡ್ ಕ್ರಾಸ್ ಮತ್ತು ವಿವಿಧ ಸಮಿತಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿನಿಯರು ಸಮಾಜದಲ್ಲಿ ಗುರುತಿಸಿಕೊಳ್ಳಲು ಗುಣಮಟ್ಟ ಶಿಕ್ಷಣ ಪಡೆದುಕೊಂಡು ವಿವಿಧ ವಿಷಯಗಳ ಅರಿವು ಹೊಂದಬೇಕು. ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಯಶಸ್ಸು ಕಾಣಬೇಕು ಎಂದರು.
ಕಾಲೇಜಿನಲ್ಲಿ 349 ವಿದ್ಯಾರ್ಥಿನಿಯರಿಗೆ ಕೇವಲ ಎರಡೇ ಶೌಚಾಲಯ ಸಾಕಾಗುವುದಿಲ್ಲ. ವಿದ್ಯಾರ್ಥಿನಿಯರ ಸಂಖ್ಯಾನುಗುಣವಾಗಿ ಇನ್ನೂ ಕೆಲವು ಶೌಚಾಲಯಗಳ ಅವಶ್ಯಕತೆ ಇದ್ದು, ಮುಂಬರುವ ದಿನಗಳಲ್ಲಿ ಶೌಚಾಲಯ ನಿರ್ಮಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದಕ್ಕೂ ಮುನ್ನ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಬಾಣಂತಿಯರ ಸಮಸ್ಯೆ ಆಲಿಸಿದರು.
ಅಧಿಕಾರಿಗಳಾದ ಎಚ್.ವಿಜಯಕುಮಾರ, ಜಲಾಲಪ್ಪ, ಡಿಎಚ್‌ಒ ಡಾ.ವೈ.ರಮೇಶಬಾಬು, ನಿವೃತ್ತ ಪ್ರಾಂಶುಪಾಲ ಡಾ.ಎಂ.ವೀರ ರಾಘವಲು, ಪ್ರಾಂಶುಪಾಲ ಡಾ. ಕೆ.ವಿ. ಪ್ರಜ್ಞಾ ಇದ್ದರು.