ರಕ್ತಹೀನತೆ ತಡೆಗೆ ಪೌಷ್ಟಿಕ ಆಹಾರ ಸೇವನೆ ಅಗತ್ಯ

Published on

ಬಳ್ಳಾರಿ : ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣಾಂಶ ನದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತಿದ್ದು, ತಪ್ಪದೇ ಎಲ್ಲರೂ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಗುರುತಿಸಲು 5ನೇ ತರಗತಿಯಿಂದ 10ನೇ ತರಗತಿ ಒಳಗಿನ ಮಕ್ಕಳ ಆರೋಗ್ಯದ ತಪಾಸಣೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ಪಿಂಕ್ ವ್ಯಾನ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ರಕ್ತಹೀನತೆ ಕಡಿಮೆ ಕಂಡುಬರುವುದರಿಂದ ಮಕ್ಕಳ ಬೆಳವಣಿಗೆ ಮತ್ತು ಅವರ ಭೌತಿಕ, ಶೈಕ್ಷಣಿಕ ಮತ್ತು ದೈಹಿಕ ಶಕ್ತಿ ಕಡಿಮೆಗೊಳ್ಳುತ್ತದೆ. ಹಾಗಾಗಿ ಮಕ್ಕಳು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಅನೀಮಿಯ ಮುಕ್ತ ಬಳ್ಳಾರಿಯನ್ನಾಗಿಸಲು ಕೈಜೋಡಿಸಬೇಕು ಎಂದರು.

ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಮಾತನಾಡಿ, ಅನೀಮಿಯ ಮುಕ್ತ ಭಾರತವನ್ನಾಗಿಸಲು ಹದಿಹರೆಯದವರಲ್ಲಿ ಆರೋಗ್ಯ ತಪಾಸಣೆ ಕೈಗೊಂಡು ಸೂಕ್ತ ಆರೋಗ್ಯ ಪರಿಕ್ರಮ ಒದಗಿಸುವುದು ಪಿಂಕ್ ವ್ಯಾನ್‌ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಲ್ಲಿ ಶೇ.50 ರಿಂದ 60ರಷ್ಟು ಹೀಮೋಗ್ಲೋಬಿನ್ ನ ಪ್ರಮಾಣವು 7 ರಿಂದ 8 ಮಿ.ಗ್ರಾಂ ಇರುವುದು ಕಂಡುಬರುತ್ತಿದ್ದು, ಇದು ಅಪಾಯಕಾರಿ ಸಂಗತಿಯಾಗಿದೆ. ಇದರಿಂದ ಮಕ್ಕಳ ಶಿಕ್ಷಣದ ಭೌತಿಕ ಮಟ್ಟ ಮತ್ತು ದೇಹದ ಶಕ್ತಿ ಕುಗ್ಗುವಿಕೆ ಕಾರಣವಾಗಲಿದೆ. ಹಾಗಾಗಿ ಮಕ್ಕಳಲ್ಲಿ ಹೀಮೋಗ್ಲೋಬಿನ್ ಪ್ರಮಾಣವು 11 ರಿಂದ 12 ಮಿ.ಗ್ರಾಂ ಹೆಚ್ಚಿರಬೇಕು. ಇದರಿಂದ ಮಕ್ಕಳ ಆರೋಗ್ಯವು ವೃದ್ಧಿಯಾಗಲಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net