ಬಳ್ಳಾರಿ : ಸವಿತಾ ಮಹರ್ಷಿ ಅವರ ಹಾದಿಯಲ್ಲಿ ಸಾಗಿ ಆಚಾರ-ವಿಚಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪಗಳಾಗಬಹುದು ಎಂದು ಎಸಿ ಪಿ.ಪ್ರಮೋದ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ. ಪ್ರತಿಯೊಬ್ಬರೂ ತಾನು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಉಪನ್ಯಾಸಕ ಯು.ಶ್ರೀನಿವಾಸಮೂರ್ತಿ ಮಾತನಾಡಿ, ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ಎಲ್ಲ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಶಿವನ ದಿವ್ಯ ದೃಷ್ಠಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಅದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದ್ದಾರೆ. ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದವರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂಬುದು ಪ್ರತಿಥಿ ಇದೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.
ಬಳಿಕ ಸಮುದಾಯದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.