

ಉಡುಪಿ: ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಹತ್ಯೆ ಎರಡು ಭಿನ್ನಪ್ರಕರಣಗಳು. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ವೈಯಕ್ತಿಕ ಕಾರಣಕ್ಕೆ ಮಸೂದ್ ಹತ್ಯೆ ನಡೆದಿದೆ. ಆದರೆ ಪ್ರವೀಣ್ ನೆಟ್ಟಾರ್ ಉದ್ದೇಶಪೂರ್ವಕ ಕೊಲೆ ಎಂದು ಮೀನುಗಾರಿಕ ಸಚಿವ ಎಸ್. ಅಂಗಾರ ಹೇಳಿದರು.
ಸೋಮವಾರ ಮಣಿಪಾಲದ ರಜತಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಭೇದ ಭಾವ ಇಲ್ಲ. ಯಾರಿಗೂ ತಾರತಮ್ಯ ಮಾಡಿಲ್ಲ. ಮಾಡುವುದಿಲ್ಲ ಎಂದರು.
ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದೆ. ಮತ್ತಿಬ್ಬರನ್ನು ಪತ್ತೆ ಹಚ್ಚುವ ಕೆಲಸ ಇಲಾಖೆ ಮಾಡುತ್ತಿದೆ. ಘಟನೆಯ ಬಳಿಕ ಸರ್ಕಾರ ಕ್ಷಿಪ್ರವಾಗಿ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಮುಖ್ಯಮಂತ್ರಿಗಳು ಸ್ವತಃ ಬೆಳ್ಳಾರೆಗೆ ಬಂದಿದ್ದಾರೆ. ಈಗ ಕಾರ್ಯಕರ್ತರು ಸಮಾಧಾನ ಉಪಶಮನವಾಗಿದೆ. ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ರಾಜೀನಾಮೆ ಪರಿಹಾರವಲ್ಲ. ಹಂತಕರಿಗೆ ಸೂಕ್ತ ಶಿಕ್ಷೆ ಪರಿಹಾರ ಎಂದರು.