

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಉದಯ ಹಾಸ್ಟೇಲ್ ಬಳಿ ನಿರ್ಮಿಸುತ್ತಿರುವ ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡಗಳ ಕಾಮಗಾರಿಯನ್ನು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಶನಿವಾರ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಂಜೂರಾತಿ ಪಡೆಯಲಾಗಿತ್ತು. ಅದರಂತೆ 500 ವಿದ್ಯಾರ್ಥಿಗಳು ಮತ್ತು 500 ವಿದ್ಯಾರ್ಥಿನಿಯರು ಸೇರಿ ಸಾವಿರ ವಿದ್ಯಾರ್ಥಿಗಳ ಅನುಕೂಲಕ್ಕೆ ಅಂದಾಜು 82.56 ಕೋಟಿ.ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯ ನಿಮಿರ್ಸಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಏಕೀಕೃತ ವಿದ್ಯಾರ್ಥಿ ನಿಲಯ ನಿರ್ಮಿಸುವ ಉದ್ದೇಶದಿಂದ ಕಾಮಗಾರಿ ಆರಂಭಿಸಲಾಗಿದೆ ಎಂದರು.
ದೀನ್ ದಯಾಳ್ ಉಪಾಧ್ಯಾಯ ಹೆಸರಿನ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ಕಲ್ಪಿಸಲಾಗುವುದು. ಆದರೆ 4 ಇಲಾಖೆಗಳ ಪೈಕಿ 2 ಇಲಾಖೆಗಳಿಂದ ಮಾತ್ರ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದ ಇಲಾಖೆಗಳಿಂದ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇದೇ ಕಟ್ಟಡದ ಪಕ್ಕದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕರ್ನಾಟಕ ಗೃಹ ನಿರ್ಮಾಣ ಸಂಸ್ಥೆಯು 20 ಕೋಟಿ ರೂ. ವೆಚ್ಚದಲ್ಲಿ 500 ವಿದ್ಯಾರ್ಥಿಗಳಿಗೆ ಮತ್ತೊಂದು ಕಟ್ಟಡ ನಿರ್ಮಿಸುತ್ತಿದೆ. ಈ ಕಾಮಗಾರಿಯನ್ನು ಬೆಂಗಳೂರು ಮೂಲದ ಅರುಣಾ ಕನ್ಸ್ಟ್ರಕ್ಷನ್ ಕಂಪನಿ ನಿರ್ವಹಿಸುತ್ತಿದೆ ಎಂದರು.
ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ, ಮುಖಂಡರಾದ ಬಸವರಾಜ ಗರಗ, ರಾಜೇಶ ಕೋಟೆಣ್ಣವರ, ಮಕ್ತುಂಹುಸೇನ ಲಷ್ಕರಿ, ಚಿದಾನಂದ ಪಾಟೀಲ, ಅಧಿಕಾರಿಗಳು, ಇತರರು ಇದ್ದರು.