ಇತಿಹಾಸ ನಿರ್ಮಿಸಿದ ಬೆಲ್ಲದ-ಹಲಗತ್ತಿ ಬಣ

26 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ ಸುಮಾರು ಒಂದು ತಿಂಗಳಿಂದ ಅತ್ಯಂತ ಕುತೂಹಲ ಮೂಡಿಸಿದ್ದ ರಾಜ್ಯದ ಪ್ರತಿಷ್ಠಿತ ಸಂಘವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಪ್ರಕ್ರಿಯೆಗೆ ಸೋಮವಾರ ತೆರೆ ಬಿದ್ದಿದ್ದು, ಈ ಚುನಾವಣೆಯಲ್ಲಿ ಒಂದೇ ಬಣ ಸಂಪೂರ್ಣ ಮೇಲುಗೈ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಚುನಾವಣೆ ಘೋಷಣೆಯಾದರೆ ಸಾಕು ಬಣಗಳು ಇದ್ದದ್ದೇ. ಆದರೆ ಸತತವಾಗಿ ಅಧ್ಯಕ್ಷರನ್ನು (ಪಾಟೀಲ ಪುಟ್ಟಪ್ಪ ಅವಧಿಯಲ್ಲಿ ಮಾತ್ರ) ಹೊರತುಪಡಿಸಿ ಉಳಿದ ಸದಸ್ಯರು ಒಂದೇ ಬಣದಿಂದ ಆಯ್ಕೆಯಾದ ಇತಿಹಾಸವೇ ಇಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸಹ 2 ಬಣಗಳ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಸಮ್ಮಿಶ್ರ ಆಡಳಿತ ನಡೆಸುವಂತಾಗಿತ್ತು. ಆದರೆ ಈ ಬಾರಿ ಮಾತ್ರ ಒಂದೇ ಬಣಕ್ಕೆ ಮತದಾರರ ಬಹುಪರಾಕ್​ ಹೇಳಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ಈ ಹಿಂದಿನ ಆಡಳಿತ ಮಂಡಳಿ ಕೆಲ ಬದಲಾವಣೆಯೊಂದಿಗೆ ಚಂದ್ರಕಾಂತ ಬೆಲ್ಲದ ಹಾಗೂ ಶಂಕರ ಹಲಗತ್ತಿ ನೇತೃತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಿತ್ತು. ಪ್ರತಿಸ್ಪರ್ಧಿಯಾಗಿ ಪಾಪು ಅಭಿಮಾನಿ ಬಳಗದ ತಂಡ ಕಣಕ್ಕಿಳಿದಿತ್ತು. ಚುನಾವಣೆ ಸಮಯದಲ್ಲಿ ರಾಜಕೀಯವೂ ಸೇರಿ ಸಾಕಷ್ಟು ವಿಚಾರವಾಗಿ ಎರಡೂ ಬಣಗಳೂ ಆರೋಪ ಪ್ರತ್ಯಾರೋಪ ನಡೆಸಿದ್ದವು. ಆದರೆ ಹಿಂದಿನ ಆಡಳಿತ ಮಂಡಳಿಯ ಭೌತಿಕ ಅಭಿವೃದ್ಧಿ, ಇತರ ಕಾರ್ಯಗಳನ್ನು ಮೆಚ್ಚಿ ಮತದಾರರು ಅದೇ ತಂಡಕ್ಕೆ ಮತ್ತೆ ಆಡಳಿತ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಿದ್ದಾರೆ. ಪಾಪು ಅಭಿಮಾನಿ ಬಳಗ ಚುನಾವಣೆಗೂ ಕೆಲ ದಿನಗಳ ಮುಂಚಿತವಾಗಿ ರಚನೆಯಾದರೂ ಪ್ರಬಲ ಪೈಪೋಟಿ ನೀಡಿದೆ. ಎಲ್ಲ ಸ್ಥಾನಗಳಲ್ಲೂ ಸಾಕಷ್ಟು ಟಕ್ಕರ್​ ನೀಡಿ, ಒಂದು ಹಂತದಲ್ಲಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಕೊನೇ ಹಂತದಲ್ಲಿ ಬೆಲ್ಲದ-ಹಲಗತ್ತಿ ಬಣದ ಸದಸ್ಯರು ವಿಜಯದ ಮಾಲೆಗೆ ಕೊರಳೊಡ್ಡಿದ್ದಾರೆ. * ಸಂಘವು ನಾಡು ನುಡಿಗಾಗಿ ಶ್ರಮಿಸುತ್ತ, ಕನ್ನಡ ಕಟ್ಟಿದ ಸಂಸ್ಥೆ. ಇಂತಹ ಸಂಸ್ಥೆಗೆ ಆದ್ಯತೆ ಅನುಸಾರ ಅನುದಾನ ನೀಡಿ ಕನ್ನಡಪರ ಚಟುವಟಿಕೆಗೆ ಬೆಂಬಲಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರದಿಂದ ಅನುದಾನ ತರುವ ಪ್ರಯತ್ನ ನಿರಂತರ ಮಾಡಲಾಗಿದೆ. ಇದಕ್ಕೆ ಸರ್ಕಾರವೂ ಸ್ಪಂದಿಸಬೇಕು. ಕೇಳುವುದಕ್ಕಿಂತ ಮುಂಚೆಯೇ ಕರ್ನಾಟಕದ ಹೆಮ್ಮೆಯ ಸಂಸ್ಥೆಗೆ ತಾನೇ ಅನುದಾನ ನೀಡಬೇಕು ಎಂಬುದು ನಮ್ಮ ಆಶಯ. ಬೆಂಬಲಿಗರ ಪ್ರೀತಿ, ವಿಶ್ವಾಸ, ನಮ್ಮ ಕಾರ್ಯ ಚಟುವಟಿಕೆಗಳು ಸಂಘಕ್ಕೆ ಪುನರಾಯ್ಕೆಯಾಗುವಲ್ಲಿ ಮಹತ್ವದ ಪಾತ್ರವಹಿಸಿದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ. ಚುನಾವಣೆಯಲ್ಲಿ ಪ್ರತಿಸ್ಪಧಿರ್ಗಳು ಸಹಜ. ಹಾಗೆಯೇ ಸೋಲು ಗೆಲುವು ಇರುತ್ತದೆ ಎಂದು ನೂತನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

* ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿಚುನಾವಣೆಯಲ್ಲಿ ನಮ್ಮ ಇಡೀ ತಂಡಕ್ಕೆ ಬೆಂಬಲ ಸೂಚಿಸಿದ ಮತದಾರರಿಗೆ ಅಭಿನಂದನೆ. ಕಳೆದ ಚುನಾವಣೆಯಲ್ಲಿ ನಾವು ಹಾಕಿಕೊಂಡಿದ್ದ ಗುರಿಯನ್ನು 3 ವರ್ಷದಲ್ಲಿ ಪೂರೈಸಿದ್ದೇವೆ. ಈ ಬಾರಿ ಸಹ 11 ಘೋಷಣೆಗಳೊಂದಿಗೆ ಸ್ಪಧಿರ್ಸಿದ್ದೆವು. ಆ ಎಲ್ಲ ವಿಶಿಷ್ಟ ಕಾರ್ಯಗಳನ್ನು ಸಂಘದ ಸದಸ್ಯರ ಜತೆಗೂಡಿ ಪೂರೈಸುತ್ತೇವೆ. ಕನ್ನಡ ನಾಡು, ನುಡಿ ವಿಚಾರದ ಹೋರಾಟದಲ್ಲಿ ಸಂಘ ಸದಾ ಮುಂಚೂಣಿಯಲ್ಲಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net