

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ತಿರುಚಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದು ಕಾಂಗ್ರೆಸ್ ಟೂಲ್ ಕಿಟ್ನ ಒಂದು ಭಾಗ. ಇಂದಿನ ಹು-ಧಾ ಬಂದ್ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನೀಡಿರುವಷ್ಟು ಹಿಂಸೆ, ಅವಮಾನವನ್ನು ಯಾರೂ ಮಾಡಿಲ್ಲ. ಅದನ್ನು ಸ್ವತಃ ಅಂಬೇಡ್ಕರ್ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಸುಡುವ ಮನೆ ಎಂಬುದಾಗಿ ಅವರೇ ಹೇಳಿದ್ದರೂ, ಕೆಲ ಸಂಘಟನೆಗಳು ಇದೇ ಕಾಂಗ್ರೆಸ್ ಜತೆಗೆ ಕೈ ಜೋಡಿಸಿರುವುದು ವಿಪರ್ಯಾಸ. ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿರುವ ಅವಮಾನ ಈ ಸಂಘಟನೆಗಳಿಗೆ ಗೊತ್ತಿಲ್ಲವೇ?. ಈ ವಿಷಯವಾಗಿ ನಾನು ಯಾವುದೇ ವೇದಿಕೆಯಲ್ಲೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ನಿರಂತರ ಅವಮಾನ, ಶೋಷಣೆಯಿಂದ ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದೇ ಕಾಂಗ್ರೆಸ್. 1952ರಲ್ಲಿ ಲೋಕಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷವು ನಾರಾಯಣ ಸದೋಬ ಎಂಬುವರನ್ನು ನಿಲ್ಲಿಸಿ 15,000 ಮತಗಳಿಂದ ಸೋಲಿಸಿತು. 1954ರ ಉಪ ಚುನಾವಣೆಯಲ್ಲಿ ಸ್ವತಃ ಅಂದಿನ ಪ್ರಧಾನಿ ನೆಹರು ಖುದ್ದು ಬಾಬಾ ಸಾಹೇಬರ ವಿರುದ್ಧ ಪ್ರಚಾರ ನಡೆಸಿ ಸೋಲಿಸಿದರು. ಈ ಮೂಲಕ ಅಂಬೇಡ್ಕರ್ ಅವರನ್ನಷ್ಟೇ ಅಲ್ಲದೆ ದಲಿತರು ಮತ್ತು ಶೋಷಿತರ ಧ್ವನಿಯನ್ನೇ ಸಂಸತ್ತಿನಿಂದ ಹೊರಗಿಟ್ಟಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರ್ ನಿಧನದ ನಂತರ ಕಾಂಗ್ರೆಸ್ಗೆ ಅವರ ಮೇಲಿನ ದ್ವೇಷ ಭಾವನೆ ತಗ್ಗಲಿಲ್ಲ. ಅವರು ನಿಧನರಾದಾಗ ಸಮಾಧಿಗೆ ಒಂದಿಚೂ ಜಾಗ ನೀಡದೆ ಅವಮಾನಿಸಿದೆ. ಬಾಬಾಸಾಹೇಬರು ರಚಿಸಿದ ಸಂವಿಧಾನ ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದು ಬಿಟ್ಟರೆ ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಬಾಬಾಸಾಹೇಬರಿಗೆ ಭಾರತರತ್ನ ಗೌರವ ನೀಡುವುದರಿಂದ ಅವರ ಜೀವನದೊಂದಿಗೆ ನಂಟು ಹೊಂದಿದ್ದ ಪಂಚ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇ ಬಿಜೆಪಿ. ಪ್ರಧಾನಿ ಮೋದಿ ಅವರು ಸಂವಿಧಾನದ ಚಿರಸ್ಮರಣೆಗೆ ನ. 26ರಂದು ಸಂವಿಧಾನ ದಿನಾಚರಣೆ ಎಂದು ಘೋಷಿಸಿದ್ದಾರೆ. ಬಿಜೆಪಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಸದಾ ಗೌರವಿಸುತ್ತಲೇ ಬಂದಿದೆ ಎಂದು ಬೆಲ್ಲದ ತಿಳಿಸಿದ್ದಾರೆ.