ತುಷ್ಟೀಕರಣಕ್ಕಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿಗೆ ವಿಳಂಬ

BJP NEW
Published on

ಹುಬ್ಬಳ್ಳಿ : ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮತಿ ನೀಡದೆ ವಿಳಂಬ ಮಾಡುತ್ತಿದೆ. ಆ ಮೂಲಕ ಮುಸ್ಲಿಂರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ಶಾಸಕರ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬೆಲ್ಲದ, ಕಿತ್ತೂರು ಚನ್ನಮ್ಮ ಮೈದಾನ ಮಹಾನಗರ ಪಾಲಿಕೆಯ ಆಸ್ತಿ. ಗಣೇಶೋತ್ಸವ ಆಚರಣೆಗೆ ಸರ್ಕಾರದ ಅನುಮತಿ ಬೇಕಿಲ್ಲ. ಆದರೆ, ಅನುಮತಿ ಕೋರಿ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಅವರು ಒಂದು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ಹೀಗಾಗಿ, ಅನುಮತಿಗಾಗಿ ಕಾಯಬೇಕಿದೆ ಎಂದರು.

ಕಳೆದ ಬಾರಿ ಶಾಂತಯುತವಾಗಿ ಈ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲಾಗಿತ್ತು. ಈ ಬಾರಿಯೂ ಸರ್ಕಾರ ಅನುಮತಿ ನೀಡಲಿ ಅಥವಾ ಬಿಡಲಿ, ಗಣೇಶೋತ್ಸವ ಆಚರಿಸುವುದು ಖಚಿತ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಈ ಮೈದಾನದಲ್ಲಿ ಮುಸ್ಲಿಂರು ವರ್ಷಕ್ಕೆ ಎರಡು ಬಾರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಟಿಪು್ಪ ಜಯಂತಿಯನ್ನೂ ಆಚರಿಸಲಾಗಿದೆ ಎಂದರು.

ನಾನು ಸಹ ಕಿತ್ತೂರು ಚನ್ಮಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಅನುಮತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಆದರೆ, ಇದುವರೆಗೆ ಯಾವುದೇ ರೀತಿಯ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಲ್ಲಿ ಆತ್ಮೀಯತೆ ಇದೆ. ಅವರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದ ಶಾಸಕ ಅರವಿಂದ ಬೆಲ್ಲದ, ಪ್ರತಿಪಕ್ಷ ನಾಯಕ ಸೇರಿದಂತೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಒಂದೆಡೆ ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಸರಿಯಾಗಿ ಸಾರಿಗೆ ಬಸ್​ಗಳನ್ನು ಬಿಡುತ್ತಿಲ್ಲ ಎಂದು ದೂರಿದರು.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಸಾರ್ವಜನಿಕರೊಂದಿಗೆ ಸೇರಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಶಿವು ಹಿರೇಮಠ, ಬಿಜೆಪಿಯ ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ರವಿ ನಾಯಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net