ಆದಾಯ ಹೆಚ್ಚಿಸಿಕೊಂಡ ರಂಗಪ್ಪ!

br hills
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಇತ್ತೀಚೆಗೆ ದೇಶ, ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಾಯವೂ ಹೆಚ್ಚಾಗಿ ಬರುತ್ತಿದೆ.

ಬಿಳಿಗಿರಿರಂಗನಬೆಟ್ಟ ವೈಷ್ಣವ ಪರಂಪರೆಯ ಪುಣ್ಯಕ್ಷೇತ್ರವಾಗಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇಗುದಲ್ಲಿ ಕಳೆದ ತಿಂಗಳಿಂದ ಆದಾಯ ಹೆಚ್ಚಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಶ್ರೀಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಅನೇಕ ಸೇವೆಗಳು ಹಾಗೂ ಕಾಣಿಕೆ ರೂಪದಲ್ಲಿ ಹುಂಡಿಗಳಲ್ಲಿ ಸಂಗ್ರಹವಾಗುವ ಹಣದ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇವಸ್ಥಾನದಲ್ಲಿ ಮೂರು ತಿಂಗಳಿಗೊಮ್ಮೆ ಅಥವಾ ಹುಂಡಿ ತುಂಬಿದ ಸಂದರ್ಭದಲ್ಲಿ ಎಣಿಕೆ ಮಾಡಲಾಗುತ್ತದೆ.

ಕಳೆದ ಮಾರ್ಚ್‌ನಲ್ಲಿ ಹುಂಡಿ ಎಣಿಕೆ ನಡೆದ ಸಂದರ್ಭ ಮೂರು ತಿಂಗಳ ಅವಧಿಯಲ್ಲಿ 31 ಲಕ್ಷ ರೂ. ಸಂಗ್ರಹವಾಗಿತ್ತು. ಇತ್ತೀಚೆಗೆ, ಜು. 12ರಂದು ಮತ್ತೆ ಹುಂಡಿ ಎಣಿಕೆ ನಡೆದಿದ್ದು, ಆ ವೇಳೆ 42.11 ಲಕ್ಷ ರೂ. ಸಂಗ್ರಹವಾಗಿತ್ತು. ಈ ಮೂಲಕ 11.11 ಲಕ್ಷ ರೂ. ಅಧಿಕ ಕಾಣಿಗೆ ಬಂದಿದೆ. ಇದರೊಂದಿಗೆ, ಈ ಬಾರಿ ಒಂದು ಚಿನ್ನದ ತಾಳಿ, ಲಕ್ಷ್ಮೀಕಾಸು, ಗುಂಡುಗಳು, ಮಾಂಗಲ್ಯಸರ, ಬೆಳ್ಳಿಯ ದೇವರ ಕಣ್ಣುಗಳು, ಕುಂಕುಮದ ಬಟ್ಟಲುಗಳು, ಗಂಟೆ, ತೊಟ್ಟಿಲು, ಅಮ್ಮನವರ ಮುಖವಾಡ ಸೇರಿದಂತೆ ಅನೇಕ ವಸ್ತುಗಳು ಕಾಣಿಕೆ ರೂಪದಲ್ಲಿ ಲಭಿಸಿವೆ. ಜತೆಗೆ, ಅಮೆರಿಕ, ನೇಪಾಳ, ಆಸ್ಟ್ರೇಲಿಯಾ ಇನ್ನಿತರ ದೇಶಗಳಿಂದ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು, ಅವರು ವಿವಿಧ ಪೂಜೆಗಳನ್ನು ಮಾಡಿಸುವುದರ ಜತೆಗೆ, ವಿದೇಶಿ ಕರೆನ್ಸಿಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಿದ್ದು, ಹುಂಡಿಗಳಲ್ಲಿ ಆ ಕರೆನ್ಸಿಗಳೂ ಲಭಿಸಿವೆ.

ಉತ್ಸವಗಳಿಂದಲೂ ಆದಾಯ: ದೇಗುಲದಲ್ಲಿ ಮಾಡಿಸುವ ಅರ್ಚನೆ, ಗರುಡೋತ್ಸವ, ಬಣ್ಣದ ಗರುಡೋತ್ಸವ, ಅಭಿಷೇಕ ಇನ್ನಿತರ ಸೇವೆಗಳ ಮೂಲಕವೂ ದೇಗುಲಕ್ಕೆ ಹೆಚ್ಚಿನ ಆದಾಯ ಹರಿದುಬರುತ್ತಿದೆ. ಕಳೆದ ಒಂದು ತಿಂಗಳಲ್ಲಿ ಈ ಎಲ್ಲ ಸೇವೆಗಳಿಂದ 2.49 ಲಕ್ಷ ರೂ. ಸಂಗ್ರಹವಾಗಿದೆ. ಅಲ್ಲದೆ, ಇಲ್ಲಿ ನಡೆಯುವ ದಾಸೋಹಕ್ಕೆ ಭಕ್ತರು 1.75 ಲಕ್ಷ ರೂ.ಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ಅಲ್ಲದೆ, ಇ-ಹುಂಡಿಯಲ್ಲೂ ಕಳೆದ ತಿಂಗಳು 12 ಸಾವಿರ ರೂ. ಸಂಗ್ರಹವಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ಶನಿವಾರ ವಿಶೇಷ ದಿನ: ಶನಿವಾರ ದೇವರ ವಿಶೇಷ ದಿನವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರೊಂದಿಗೆ, ಭಾನುವಾರವೂ ಹೊರ ಜಿಲ್ಲೆಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. 6 ರಿಂದ 7 ಸಾವಿರ ಜನರು ಹೆಚ್ಚಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಆ ದಿನ ಯಳಂದೂರು ಪಟ್ಟಣದಿಂದ ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್ ಬಿಡಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ಕಳೆದ ಒಂದು ತಿಂಗಳಿನಿಂದ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳಾ ಭಕ್ತರ ಸಂಖ್ಯೆಯೇ ಹೆಚ್ಚಿರುತ್ತದೆ. ದೇವಸ್ಥಾನದ ಇ-ಹುಂಡಿ, ವಿವಿಧ ಸೇವೆಗಳಲ್ಲೂ ಏರಿಕೆ ಕಂಡುಬಂದಿದೆ. ಇಲ್ಲಿಗೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನೂ ದೇವಸ್ಥಾನದ ಕಡೆಯಿಂದ ಮಾಡಲಾಗುತ್ತಿದೆ. ದೇಗುಲದ ಹುಂಡಿಯಲ್ಲಿ ಎಣಿಕೆ ಸಮಯದಲ್ಲಿ ವಿದೇಶಿ ಕರೆನ್ಸಿಗಳೂ ದೊರಕುತ್ತಿವೆ.-ಮೋಹನ್‌ಕುಮಾರ್ ಇಒ, ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net