ಬಂಗಾರದ ನಾಣ್ಯವೆಂದು ನಂಬಿಸಿ ಪಿಗ್ಮಿ ಸಂಗ್ರಹಕಾರನಿಗೆ ಲಕ್ಷ ರೂ. ವಂಚನೆ

tunga nagar police station
ತುಂಗಾನಗರ ಠಾಣೆ
Published on

ಶಿವಮೊಗ್ಗ: ಹಳೇ ಕಾಲದ ಬಂಗಾರದ ನಾಣ್ಯಗಳಿವೆ ಎಂದು ನಂಬಿಸಿ ಪಿಗ್ಮಿ ಸಂಗ್ರಹಕಾರನಿಗೆ ಒಂದು ಲಕ್ಷ ರೂ. ವಂಚಿಸಿರುವ ಪ್ರಕರಣ ತುಂಗಾನಗರ ಠಾಣೆ ಮೆಟ್ಟಿಲೇರಿದೆ.

ಗೋಪಿಶೆಟ್ಟಿಕೊಪ್ಪದ ಪಿಗ್ಮಿ ಕಲೆಕ್ಟರ್ ಮೋಸ ಹೋದವರು. ಇತ್ತೀಚೆಗೆ ಚಿಕ್ಕಮಗಳೂರಿಗೆ ಕಾರಿನಲ್ಲಿ ತೆರಳಿದ್ದ ಪಿಗ್ಮಿ ಕಲೆಕ್ಟರ್‌ಗೆ ಶಾಂತವೇರಿ ಬಳಿ ನಿಂತಿದ್ದ ಅಪರಿಚಿತನೊಬ್ಬ ಹತ್ತಿರ ಬಂದು ತೋಟದ ಕೆಲಸಕ್ಕೆ ಆಳುಗಳಿದ್ದರೆ ತಿಳಿಸಿ ಎಂದು ಕೇಳಿದ್ದ. ಈ ವೇಳೆ ಇಬ್ಬರು ಪರಸ್ಪರ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಮರುದಿನವೇ ಕರೆ ಮಾಡಿದ್ದ ಅಪರಿಚಿತ ಹಳೇ ಕಾಲದ ಚಿನ್ನದ ನಾಣ್ಯಗಳಿವೆ. ಬೇಕಿದ್ದರೆ ನಿಮಗೆ ಕೊಡುತ್ತೇನೆಂದು ನಂಬಿಸಿದ್ದ. ಅದಕ್ಕೆ ಒಪ್ಪಿದ್ದ ಪಿಗ್ಮಿ ಕಲೆಕ್ಟರ್ ಹಣ ಹೊಂದಿಸಲು ಸ್ವಲ್ಪ ಸಮಯಾವಕಾಶ ಕೇಳಿದ್ದರು. ಅದರಂತೆ ಜು.20ರಂದು ಕರೆ ಮಾಡಿದ್ದ ಅಪರಿಚಿತ ಸಾಗರ ರಸ್ತೆಯ ಲಯನ್ ಸಫಾರಿ ಬಳಿ ತಿಳಿಸಿದ್ದ.
ಹಣ ಹೊಂದಿಸಿಕೊಂಡು ಪಿಗ್ಮಿ ಕಲೆಕ್ಟರ್ ಸಫಾರಿ ಬಳಿ ತೆರಳಿದಾಗ ಬೈಕ್ ಮತ್ತು ಕಾರಿನಲ್ಲಿ ಬಂದಿದ್ದ ಆರು ಜನರಲ್ಲಿ ಒಬ್ಬ, ಇವರ ಹತ್ತಿರ ಬಂದು ಪ್ಲಾಸ್ಟಿಕ್ ಕವರ್‌ನಲ್ಲಿ 50 ಗ್ರಾಂ ಚಿನ್ನದ ನಾಣ್ಯಗಳಿದ್ದು 1.5 ಲಕ್ಷ ರೂ. ನೀಡುವಂತೆ ಕೇಳಿದ್ದ. ಆದರೆ ತನ್ನಲ್ಲಿ ಅಷ್ಟೊಂದು ಹಣವಿಲ್ಲ. 1 ಲಕ್ಷ ರೂ. ಇದ್ದು ಅದನ್ನೇ ತೆಗೆದುಕೊಂಡು ಚಿನ್ನದ ನಾಣ್ಯಗಳನ್ನು ನೀಡುವಂತೆ ಪಿಗ್ಮಿ ಕಲೆಕ್ಟರ್ ಕೇಳಿದ್ದರು. ಹಣ ಪಡೆದ ಅಪರಿಚಿತ ಸೇರಿ ಆರು ಮಂದಿ ಅಲ್ಲಿಂದ ತೆರಳಿದ್ದರು.
ಮನೆಗೆ ವಾಪಸ್ ಬಂದ ಪಿಗ್ಮಿ ಕಲೆಕ್ಟರ್ ನಾಣ್ಯಗಳನ್ನು ಅಕ್ಕಸಾಲಿಗರ ಬಳಿ ಪರೀಕ್ಷಿಸಿದಾಗ ಅವು ನಕಲಿ ಎಂಬುದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿರುವುದನ್ನು ಅರಿತ ಪಿಗ್ಮಿ ಕಲೆಕ್ಟರ್ ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net