

ಬೆಳಗಾವಿ : ವಿದ್ಯುತ್ ಬಿಲ್ ಹೆಚ್ಚಳವಾಗಿರುವುದನ್ನು ವಿರೋಧಿಸಿ ಬೆಳಗಾವಿಯ ಚವ್ಹಾಟ ಗಲ್ಲಿಯ ಮಹಿಳೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ದರ ಇಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕೈಯಲ್ಲಿ ಕರೆಂಟ್ ಬಿಲ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಮಹಿಳೆಯರು ಸರ್ಕಾರದ ವಿರುದ್ಧ ಹರಿಹಾಯ್ದರು. ವಿದ್ಯುತ್ ದರ ಇಳಿಸುವ ಜತೆಗೆ 24 ಗಂಟೆ ನೀರಿನ ಸೌಕರ್ಯ ಒದಗಿಸುತ್ತೇವೆಂದು ಎಲ್‌ಆಂಡ್‌ಟಿ ಕಂಪನಿಯವರಿಗೆ ಜವಾಬ್ದಾರಿ ನೀಡಲಾಗಿತ್ತು. ಅಲ್ಲದೇ ನಮ್ಮಿಂದ 4 ಸಾವಿರ ರೂ. ಪಾವತಿಸಿಕೊಂಡಿದ್ದರೂ, 10-15 ದಿನಗಳಿಗೊಮ್ಮೆ ನೀಡು ಬಿಡುತ್ತಿದ್ದಾರೆ.ಪೈಪ್ ಲೈನ್‌ನಲ್ಲಿ ಡ್ರೈನೇಜ್ ನೀರು ಬರುತ್ತಿದೆ. ಆ ನೀರನ್ನು ಕುಡಿದು ಅನೇಕ ಜನ ವಾಂತಿ ಭೇದಿ ಸೇರಿ ಇನ್ನಿತರ ಅನಾರೋಗ್ಯದಿಂದ ಬಳಲುವಂತಾಗಿದೆ. ಹೀಗಾಗಿ ಎಲ್‌ಆಂಡ್‌ಟಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಮಹಿಳೆಯರು ಒತ್ತಾಯಿಸಿದರು.
ಚವ್ಹಾಟ ಗಲ್ಲಿಯ ಮಹಿಳೆ ಶಿಲ್ಪಾ ಬಾಳಾಠಕ್ಕೆ ಮಾತನಾಡಿ, ಈ ಬಾರಿ ವಿದ್ಯುತ್ ಬಿಲ್ ಬಹಳ ಬಂದಿದೆ. 500, 1000 ರೂ. ಬರುವುದು 2-3 ಸಾವಿರ ರೂ. ಬಂದಿದೆ. ಹೀಗೆ ಬಂದರೆ ನಾವು ಹೇಗೆ ತುಂಬುವುದು. ಇದ್ದವರು ತುಂಬುತ್ತಾರೆ, ಇಲ್ಲದವರು, ಬಡವರು ಹೇಗೆ ತುಂಬಬೇಕು. ಹುಡುಗರ ಶಾಲೆ ಫೀಜ್, ಮನೆ ಬಾಡಿಗೆ ಒಮ್ಮೆಲೆ ಬಂದರೆ ಹೇಗೆ ತುಂಬೋದು. ಈ ಸಲ ನಾವು ಬಿಲ್ ತುಂಬುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರೆಂಟ್ ಬಿಲ್ ಹೆಚ್ಚಾಗಿದೆ. ದುಡಿದಿದ್ದೆಲ್ಲ ಕರೆಂಟ್‌ಗೆ ಕೊಟ್ಟು ಹೊಟ್ಟೆಗೆ ಏನು ತಿನ್ನುವುದು. ಬಿಲ್ ಕಡಿಮೆ ಮಾಡಬೇಕು, ಇಲ್ಲದಿದ್ದರೆ ನಾವು ತುಂಬುವುದೇ ಇಲ್ಲ. ಇನ್ನು ಉಚಿತ ವಿದ್ಯುತ್ ಗ್ಯಾರಂಟಿ ನಮಗೆ ಏನೂ ಗೊತ್ತಾಗುತ್ತಿಲ್ಲ. ಈಗ 3-4 ಸಾವಿರ ರೂ ಹೆಚ್ಚಿಸಿ, ಆಮೇಲೆ ಉಚಿತ ಎಂದರೆ ಹೇಗೆ..? ಎಲ್ಲಾ ಕರೆಂಟ್ ಬಿಲ್‌ಗೆ ಹಾಕಿದರೆ ಜೀವನ ಹೇಗೆ ಮಾಡುವುದು..? ಮನೆ ಬಾಡಿಗೆ ತುಂಬುವುದೋ..? ಕರೆಂಟ್ ಬಿಲ್ ತುಂಬುವುದೋ..? ಒಂದು ತಿಳಿಯುತ್ತಿಲ್ಲ. ಕರೆಂಟ್ ಇಲ್ಲದಿದ್ದರೆ ಮಕ್ಕಳಿಗೆ ಓದಲು ತೊಂದರೆ ಆಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಚವ್ಹಾಟ ಗಲ್ಲಿ ಮಹಿಳಾ ಮಂಡಳ ಅಧ್ಯಕ್ಷೆ ಅಕ್ಕಾತಾಯಿ ಸುತಾರ, ಸುವರ್ಣಾ ಕಿಲ್ಲೇಕರ್, ಪ್ರೇಮಾ ಪಾಟೀಲ, ಮಂದಾ ಹಿಂಡಲಗೇಕರ್, ಶಾಂತಾ ನಾಯಿಕ್, ಲೀಲಾ ಹಸಬೆ, ಶಾಲನ್ ನಾಯಿಕ ಸೇರಿದಂತೆ ಇತರರಿದ್ದರು.