

ಬೆಳಗಾವಿ : ಬದುಕಿನ ಶ್ರೀಮಂತಿಕೆಗೆ ನಮ್ಮತನದಲ್ಲಿ ಸತ್ಯದ ನಡೆಯಿರಬೇಕು. ಧರ್ಮದ ನಡೆಯೊಂದೇ ನಮ್ಮನ್ನು ರಕ್ಷಿಸುವ ಮೂಲ ಮಂತ್ರವಾಗಿದ್ದು, ನಾವು ಇನ್ನೊಬ್ಬರ ನಗೆಗೆ ಕಾರಣವಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಶ್ರೀ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. ಬೆಳಗಾವಿಯ ಸದಾಶಿವ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಗುರುವಿನ ನಡೆ , ಮನೆ-ಮನೆ ಕಡೆ’ ಭವ್ಯ ಪಾದಯಾತ್ರೆ ಧಾರ್ಮಿಕ ಜನ ಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಭಯ-ಭಕ್ತಿ ಇರಲಿ. ಹಿರಿಯರನ್ನು ಗೌರವಿಸುವ ಗುಣವಿರಲಿ. ‘ನಾನು’ ಎಂಬುದು ಅತೀ ದೊಡ್ಡ ಅಹಂಕಾರ. ‘ನಾವು’ ಎಂಬುದರಲ್ಲಿ ಪ್ರೀತಿ, ಗೌರವ ಇದೆ. ಅದನ್ನು ಆಸ್ತಿಯನ್ನಾಗಿಸಿ. ‘ಸಂಸ್ಕೃತಿ’ಯು ನಮ್ಮಿಂದ ಯಾರೂ ಕಸಿಯಲಾರದ ಸಂಪತ್ತು ಅದನ್ನು ಸಂರಕ್ಷಿಸಿಕೊಂಡು ಹೋಗಬೇಕು ಎಂದರು.
ಜಾಗೃತಿಯ ಭಾಗವಾಗಿ ಲಕ್ಷ್ಮಿ ಕಾಂಪ್ಲೆಕ್ಸ್‌ದಿಂದ ಸದಾಶಿವ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡಿ ಶಿವಾಲಯದಲ್ಲಿ ಪೂಜೆ ಸಲ್ಲಿಸಿದರು. ಸವಿತಾ ಅರಬಳ್ಳಿ, ಸುವರ್ಣ ಮಾಲಗತ್ತಿ, ಹರ್ಷಿತ ಧನಾಲೆ, ಐಶ್ವರ್ಯ ಅರಬಳ್ಳಿ, ಪ್ರಿಯಂಕಾ ಪಾಟೀಲ, ಸರಳಾ ಹಿರೇಕರ, ಮುಕ್ತಾ ತುಬಚಿ, ಡಾ.ಪ್ರಭಾವತಿ ಉಪ್ಪಿನ, ಲತಾ ಗಣಾಚಾರಿ, ವಿರೇಶ ಕಿವಡಸಣ್ಣವರ, ಡಾ.ರವಿ ಪಾಟೀಲ, ಬಸವರಾಜ ಅರಬಳ್ಳಿ ಕಾರ್ಯಕ್ರಮದಲ್ಲಿದ್ದರು.