

ಬೆಳಗಾವಿ : ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೋಮುಗಲಬೆಗಳನ್ನು ತಡೆಗಟ್ಟುವುದಕ್ಕೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ಬಡ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿ ನ್ಯಾಷನಲ್ ಪೆಡರೇಷನ್ ಆಫ್ ಇಂಡಿಯನ್ ವುಮನ್‌ನ ಬೆಳಗಾವಿ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಪ್ರದಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಮಣಿಪುರದಲ್ಲಿ ನಡೆದ ಅಮಾನವೀಯ ಕೃತ್ಯದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಕೈದಿ ತಪ್ಪಿತಸ್ಥರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಹರಿಯಾಣದಲ್ಲಿ ನಡೆಯುತ್ತಿರುವ ಕೋಮುಗಲಬೆಯನ್ನು ತಡೆದು ದೇಶದ ಯಾವುದೇ ಮೂಲಯಲ್ಲೂ ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಿ ದುಷ್ಟರನ್ನು ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ ನಿತ್ಯವೂ ನೂರಾರು ಜನ ವಂಚನೆಗೊಳಪಡುತ್ತಿದ್ದಾರೆ. ಅಲ್ಲದೇ, ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆಯೇ ಹೊರತು ಸಮಯಕ್ಕೆ ಸರಿಯಾಗಿ ಜಿಲ್ಲೆಯಲ್ಲಿ ವೇತನ ಪಾವತಿಸುತ್ತಿಲ್ಲ. ಹೀಗಾಗಿ, ಕೆಲಸಕ್ಕೆ ತಕ್ಕ ಕೂಲಿ ಸಕಾಲಕ್ಕೆ ಕೂಲಿಕಾರರಿಗೆ ಸಿಗುವಂತೆ ಮುತುವರ್ಜಿವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎನ್.ಸಾತೇರಿ, ಉಪಾಧ್ಯಕ್ಷೆ ಉಮಾದೇವಿ ಮಾನೆ, ಕಾರ್ಯದರ್ಶಿ ಕಲಾ ಕಾರ್ಲೇಕರ್, ರಾಷ್ಟ್ರೀಯ ಪರಿಷತ್ ಸದಸ್ಯೆ ಮೀರಾ ಮಾದರ ಹಾಗೂ ಮಂಜುಶಾ ಮಾನೆ ಸೇರಿದಂತೆ ಇತರರು ಇದ್ದರು.