

ಬೆಳಗಾವಿ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಲೋಪ ಎಸಗಿರುವವರ ಶಿಕ್ಷಕರನ್ನು ಅಮಾನತ್ತುಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸಭೆ ನಡೆಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಗಾವಿ ನಗರದಲ್ಲಿ ಖಾಸಗಿ ಹೊಟೇಲ್ವೊಂದರಲ್ಲಿ ಸಭೆ ನಡೆಸಿ, ಅಮಾನತ್ತುಗೊಂಡ ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೇ, ಅಮಾನತ್ತು ಮಾಡಿರುವುದು ಸರಿಯಲ್ಲ. ಕೂಈಡಲೇ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೇ, ಸೋಮವಾರ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಮನವಿ ಸಲ್ಲಿಸಲು ಆಗಮಿಸುವಂತೆ ಪದಾಧಿಕಾರಿಗಳು ಸದಸ್ಯರಿಗೆ ಸೂಚಿಸಿದ್ದು, ವಾಟ್ಸಾೃಫ್ ಗ್ರೂಫ್ಗಳಲ್ಲಿ ಈ ಸಂದೇಶ ಹರಿದಾಡುತ್ತಿದೆ.
ಇಲಾಖೆಯ ಅಧಿಕಾರಿಗಳು ನಕಲಿಗೆ ಅವಕಾಶ ಕೊಡದಂತೆಯೇ ಮೇಲ್ವಿಚಾರಕರಿಗೆ ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸುವಂತೆ ನೋಡಿಕೊಳ್ಳದೇ ಇದೀಗ ತಪ್ಪಿತಸ್ಥರನ್ನಾಗಿ ಶಿಕ್ಷಕರನ್ನೇ ಮಾಡುತ್ತಿರುವುದಕ್ಕೆ ಅದರಲ್ಲೂ ಪರೀಕ್ಷಾ ಕೇಂದ್ರದ ಎಲ್ಲ ಶಿಕ್ಷಕರನ್ನೂ ಅಮಾನತ್ತು ಮಾಡದೇ ಬಡ ಶಿಕ್ಷಕರನ್ನೇ ಗುರಿಯನ್ನಾಗಿಸಿ ಕೈಗೊಂಡಿರುವ ಕ್ರಮ ಪ್ರಶ್ನಾರ್ಹ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.
ಏ.3ರಂದು ಗಣಿತ ಪರೀಕ್ಷೆಗೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆಯುತ್ತಿರುವುದನ್ನು ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಪತ್ತೆ ಹಚ್ಚಿ, ಶಿಸ್ತು ಕ್ರಮಕ್ಕೆ ಡಿಡಿಪಿಐ ಬಸವರಾಜ ನಾಲತವಾಡ ಅವರಿಗೆ ಸೂಚಿಸಿದ್ದರು. ಆದರೆ, ಏ.4 ಮತ್ತು 5ರ ಎಡರು ದಿನ ಕಳೆದರೂ ಕ್ರಮ ಜರುಗಿಸದೇ ತಪ್ಪಿತಸ್ಥರ ರಕ್ಷಣೆ ಮಾಡುತ್ತಿರುವ ಬಗ್ಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಏ.6ರಂದು ‘ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಕೃಪಾಕಟಾಕ್ಷ!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಜಿಲ್ಲಾಡಳಿತದ ಗಮನ ಸೆಳೆದಿತ್ತು.
ವಿಜಯವಾಣಿ ವರದಿಯಿಂದ ಎಚ್ಚತ್ತ ಜಿಲ್ಲಾಡಳಿತ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಅವರಿಗೆ ಪ್ರಕರಣದ ಕುರಿತು ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದ ಬಳಿಕ ಎಚ್ಚೆತ್ತ ಅಧಿಕಾರಿ ಆ ದಿನವೇ 7 ಜನ ಶಿಕ್ಷಕರನ್ನು ಅಮಾನತ್ತು ಮಾಡಿದ್ದರು. ಇದಕ್ಕೂ ಮುನ್ನ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರೂ ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಿ ಆದೇಶಿಸಿದ್ದರು.ಮತ್ತೆ ನಾಲ್ವರು ಸಹ ಶಿಕ್ಷಕರನ್ನು ಬೆಳಗಾವಿ ಗ್ರಾಮೀಣ ಬಿಇಒ ಎಸ್.ಪಿ.ದಾಸಪ್ಪನವರ ಅವರು ಅಮಾನತ್ತು ಮಾಡಿದ್ದಾರೆ.
ಬೆಂಡಿಗೇರಿಯ ಎಸ್.ಎಸ್.ಬಾಗೇವಾಡಿ, ಕುಕಡೊಳ್ಳಿಯ ಎಂ.ಬಿ.ರೊಟ್ಟಿ, ಕೊಂಡಸಕೊಪ್ಪದ ಆರ್.ಎಸ್.ಅರಳಿಕಟ್ಟಿ ಹಾಗೂ ಜಿ.ಬಿ.ಹೊರಗಿನಮನಿ ಅವರನ್ನು ಬೆಳಗಾವಿ ಗ್ರಾಮೀಣ ಬಿಇಒ ದಾಸಪ್ಪನವರ ಅವರು ಅಮಾನತ್ತು ಗೊಂಡಿದ್ದು, ಬೆಳಗಾವಿ ತಾಲೂಕಿನ ಸುಳಗೆ ಗ್ರಾಮದ ಶ್ರೀ ನೇತಾಜಿ ಪ್ರೌಢ ಶಾಲೆಯ ಎಸ್.ಎಸ್.ಕೆಂಗೇರಿ, ಯಳ್ಳೂರಿನ ಮಹಾರಾಷ್ಟ್ರ ಪ್ರೌಢಶಾಲೆಯ ಜೆ.ಪಿ.ದಾಮಣೆಕರ, ಕೆ.ಬಿ.ಪೋತೆ, ಎಲ್.ಎಫ್.ಬಸ್ತವಾಡಕರ, ರಾಕ್ಕಸಕೊಪ್ಪದ ಶಿವರಾಜ ಪ್ರೌಢಶಾಲೆಯ ಎಂ.ಪಿ.ಪಾಟೀಲ, ಯಳ್ಳೂರಿನ ಶಿವಾಜಿ ಮಹಾವಿದ್ಯಾಲಯದ ಎಚ್.ಎಸ್.ಲೋಕಾಲುಚೆ, ವಿ.ಎ.ಪಾಟೀಲ, ಎಂ.ವಿ.ಪಂತರ, ಸುಳಗೆ ಗ್ರಾಮದ ಬಿ.ಎಂ.ವಿದ್ಯಾಲಯದ ಎ.ವೈ.ಮುಜುಕರ, ಪಿ.ಆರ್.ಪಾಟೀಲ, ಎಸ್.ಬಿ.ಹನ್ನೂರಕರ್ ಹಾಗೂ ವೈ.ಎಸ್.ಹತ್ತಿಕಾರ ಅವರನ್ನು ತಕ್ಷಣವೇ ಅಮಾನತ್ತುಗೊಳಿಸಿ ವರದಿ ಒಪ್ಪಿಸುವಂತೆ ಡಿಡಿಪಿಐ ಬಸವರಾಜ ನಾಲತವಾಡ ಅವರು ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.