ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಬಿಇಒ ದಾಸಪ್ಪನವರ ಸೂಚನೆ

IMG-20230718-WA0048.jpg
Published on

ಬೆಳಗಾವಿ : ಶಾಲೆಯ ಅಭಿವೃದ್ಧಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳಾದ ಶಾಲಾ ಕಟ್ಟಡ, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಪೀಠೋಪಕರಣಗಳು, ಸುಣ್ಣ ಬಣ್ಣ, ಆಟದ ಮೈದಾನ, ಸ್ಪೋರ್ಟ್ಸ್ ಕಿಟ್, ವಿಜ್ಞಾನ ಪರಿಕರಗಳು, ಪ್ರೊಜೆಕ್ಟರ್‌ಗಳ ಬೇಡಿಕೆ ಪಟ್ಟಿಯನ್ನು ಬಿಇಒ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಬೆಳಗಾವಿ ಗ್ರಾಮೀಣ ಬಿಇಒ ಎಸ್. ಪಿ.ದಾಸಪ್ಪನವರ ಹೇಳಿದರು.

ತಾಲೂಕಿನ ಮಚ್ಚೆಯ ಡಿವೈನ್ ಮರ್ಸಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಳಗಾವಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು ಸಚಿವರಾಗಿದ್ದು, ಬೆಳಗಾವಿ ತಾಲೂಕನ್ನು ಶೈಕ್ಷಣಿಕವಾಗಿ ಮಾದರಿ ತಾಲೂಕನ್ನಾಗಿ ಮಾಡುವತ್ತ  ಸಂಕಲ್ಪ ತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಶ್ರಮವಹಿಸಬೇಕು ಎಂದರು.
 

ಮಳೆಗಾಲದ ಕಾರಣ ಶಾಲಾ ಸ್ವಚ್ಛತೆ,ಮಕ್ಕಳ ಆರೋಗ್ಯದ ಕಡೆಗೆ ನಿಗಾವಹಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಹೊಸ ಪ್ರಯೋಗ ಮಾಡಿರಿ. ನಲಿ ಕಲಿ ಉತ್ತಮ ವಿಧಾನವಾಗಿದ್ದು ಅದನ್ನು ಕಾಳಜಿ ಪೂರ್ವಕವಾಗಿ ಮುಂದುವರೆಸಿಕೊಂಡು ಹೋಗಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದರು.
 

ಮಧ್ಯಾಹ್ನದ ಬಿಸಿಯೂಟ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಆರ್. ಸಿ. ಮುದುಕನಗೌಡರ ಮಾತನಾಡಿ, ಬಿಸಿ ಊಟ, ಹಾಲು ಮತ್ತು ಪೂರಕ ಪೌಷ್ಟಿಕ ಆಹಾರ ವ್ಯವಸ್ಥಿತ ರೀತಿಯಲ್ಲಿ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಿ ಸ್ವಚ್ಛತೆಗೆ ಗಮನ ನೀಡಬೇಕು. ರಾಜ್ಯ ಸರ್ಕಾರದಿಂದ ಅಡುಗೆ ಕೇಂದ್ರಗಳಿಗೆ ಐಎಸ್‌ಓ ಪ್ರಮಾಣ ಪತ್ರ ನೀಡುತ್ತಿರುವ ಕಾರಣ ಆ ಮಾನದಂಡಗಳಿಗೆ ಅನುಸಾರವಾಗಿ ತಮ್ಮ ಅಡುಗೆ ಕೇಂದ್ರಗಳನ್ನು ವ್ಯವಸ್ಥೆ ಮಾಡಿಕೊಳ್ಳಿ ಎಂದು ಶಿಕ್ಷಕರಿಗೆ ಹೇಳಿದರು.
 

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಎಸ್.ಚಕ್ರಸಾಲಿ, ಶಿಕ್ಷಣ ಸಂಯೋಜಕ ಆರ್.ಎಂ.ಚಲುವಾದಿ, ಶಬ್ಬೀರ ಖುದ್ದುನವರ,   ಮುಖ್ಯೋಪಾಧ್ಯಾಯರಾದ ಬಿ.ಎನ್.ಮಡಿವಾಳರ, ಎನ್.ಬಿ.ಹೊಟ್ಟಿನವರ, ಶಿವಾನಂದ ತಲ್ಲೂರ, ರಾಜು ಸುತಾರ ಸೇರಿದಂತೆ ತಾಲೂಕಿನ ಎಲ್ಲಾ ಮುಖ್ಯೋಪಾಧ್ಯಾಯರು ಹಾಜರಿದ್ದರು.  ಬಿಆರ್‌ಪಿ ಗೀತಾ ಮಡಿವಾಳರ ಸ್ವಾಗತಿಸಿದರು. ಬಿಆರ್‌ಪಿ ಬಿ.ಎಂ.ಬಡಿಗೇರ ಹಾಗೂ  ಶಿಕ್ಷಣ ಸಂಯೋಜಕ ವಿಜಯ ಪಾಚ್ಚಾಪೂರ ಕಾರ್ಯಕ್ರಮ ನಿರ್ವಹಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net