

ಚಿಕ್ಕೋಡಿ/ ಬೆಳಗಾವಿ : ಜಿಲ್ಲಾದ್ಯಂತ ಭಾನುವಾರ ಮಳೆ ತಗ್ಗಿದ್ದು, ಖಾನಾಪುರ ಹಾಗೂ ಬೆಳಗಾವಿ ತಾಲೂಕು ಸೇರಿದಂತೆ ಹಲವೆಡೆ ಬಹಳ ದಿನಗಳ ಬಳಿಕ ಬಿಸಿಲು ಮೂಡಿತ್ತು. ಜಿಲ್ಲೆಯಲ್ಲಿನ ನದಿಗಳ ಪ್ರವಾಹ ಇಳಿಮುಖವಾಗಿದ್ದು, ನದಿ ತಟದ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಶನಿವಾರದ ವರೆಗೂ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕೃಷ್ಣಾ , ವೇದಗಂಗಾ, ದೂಧಗಂಗಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಏರಿಕೆಯಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. 30ಕ್ಕೂ ಅಧಿಕ ಕೆಳಹಂತದ ಸೇತುವೆಗಳು ಮುಳುಗಡೆಯಾಗಿ, ಸಾವಿರಾರು ಹೆಕ್ಟೇರ್ ಜಮನೀನಲ್ಲಿ ನದಿ ನೀರು ನುಗ್ಗಿತ್ತು. ಆದರೆ, ಸದ್ಯ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ನದಿ ನೀರಿನ ಮಟ್ಟದಲ್ಲಿ ಸ್ಥಿರತೆ ಕಂಡು ಬಂದಿದ್ದು, ಇದರಿಂದಾಗಿ ಪ್ರವಾಹದ ಭೀತಿಯಲ್ಲಿದ್ದಂತಹ ನದಿತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.