

ಬೆಳಗಾವಿ : ಕಳೆದೆರಡು ದಿನಗಳಿಂದ ಜಿಲ್ಲಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ಜಲಾಶಯದ ಒಳಹರಿವು ತುಸು ಹೆಚ್ಚಾಗಿದ್ದು, ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಖಾನಾಪುರ, ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಸವದತ್ತಿ ಹಾಗೂ ಹುಕ್ಕೇರಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಗುರುವಾರ ರಾತ್ರಿಯಿಂದಲೇ ಸಾಧಾರಣ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿಯೂ ನಿರಂತರವಾಗಿ ಜಿಟಿ ಜಿಟಿ ಮಳೆ ಹಿಡಿದಿದ್ದು, ಜನ ರೇನ್‌ಕೋಟ್ ಹಾಗೂ ಛತ್ರಿಗಳ ಮೊರೆ ಹೋಗಿದ್ದಾರೆ.
ಜಿಲ್ಲಾದ್ಯಂತ ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮುಂದಿನ ಒಂದು ವಾರ ಉತ್ತಮವಾಗಿ ಮಳೆಯಾದರೆ, ಮಲಪ್ರಭಾ ನದಿಯ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಗೆ ಮುಂಗಾರು ಮಳೆ ತಡವಾಗಿ ಆರಂಭವಾಗಿದ್ದು, ಸೋನೆ ಮಳೆ ಬಿರುಸಾಗುವ ಲಕ್ಷಣ ಕಂಡುಬರುತ್ತಿರುವುದರಿಂದ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ.