ಕಾವೇರಿದ್ದ ಇಳೆಗೆ ತಂಪೆರೆದ ಮಳೆ‌: ತಿಂಗಳ ಬಳಿಕ ಸುರಿದ ವರುಣ

IMG-20230901-WA0069.jpg
Published on

ಬೆಳಗಾವಿ : ‘ಬಂದರೆ ಮಗೆ-ಹೋದರೆ ಹೊಗೆ’ ಎನ್ನುವಂತೆಯೇ ಈ ಬಾರಿ ಮೆ ಮಳೆ ಸುರಿಯದೇ ಧಗೆ ಉಂಟುಮಾಡಿತ್ತು. ಆದರೆ, ಇದೀಗ ಹುಬ್ಬ ಮಳೆ ರೈತರ ಮೇಲೆ ಕೃಪೆ ತೋರಿದಂತಿದ್ದು, ಶುಕ್ರವಾರ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಕಳೆದೊಂದು ತಿಂಗಳಿನಿಂದ ಮಳೆ ಹನಿ ಧರೆಗುರಳದೇ ಬರದ ಛಾಯೆ ಆವರಿಸಿತ್ತು. ಬಿತ್ತಿ ಬೆಳೆದ ಪೈರು ಹೂವು ಮಿಡಿಯುವ ಮುನ್ನವೇ  ಒಣಗುತ್ತಿದ್ದರಿಂದ ಇಡೀ ರೈತ ಸಮುದಾಯ ವರುಣನಿಗಾಗಿ ಪ್ರಾರ್ಥಿಸುತ್ತಿತ್ತು. ಗುರುವಾರದಿಂದಲೇ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣದ ಜತೆಗೆ ಮಿಂಚು-ಸಿಡಿಲು ಆರ್ಭಟಿಸಿತ್ತು. ಶುಕ್ರವಾರ ಬೆಳಗ್ಗೆಯಿಂದಲೇ ಝಳ ಸುರಿತ್ತಿತ್ತು, ಮಧ್ಯಾಹ್ನದ ಬಳಿಕ ಕೆಲವೊತ್ತು ಮಳೆ ಸುರಿಯುವ ಮೂಲಕ ಕಾವೇರಿದ್ದ ಇಳೆಗೆ ತಂಪೆರೆಯಿತು.

ಬೆಳಗಾವಿಯಲ್ಲಿ ಶಾಲಾ ವಿದ್ಯಾರ್ಥಿಗಳು ಶುಕ್ರವಾರ ಮಳೆಯಲ್ಲಿ ನೆಂದರು
ಬೆಳಗಾವಿಯಲ್ಲಿ ಶಾಲಾ ವಿದ್ಯಾರ್ಥಿಗಳು ಶುಕ್ರವಾರ ಮಳೆಯಲ್ಲಿ ನೆಂದರು

ನಗರ ಸೇರಿದಂತೆ ಬೆಳಗಾವಿ ತಾಲೂಕು, ಖಾನಾಪುರ, ಸವದತ್ತಿ, ಬೈಲಹೊಂಗಲ, ಹುಕ್ಕೇರಿ, ನಿಪ್ಪಾಣಿ, ಅಥಣಿ ಹಾಗೂ ಚಿಕ್ಕೋಡಿ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಕಳೆದೊಂದು ವಾರದಿಂದ ಬೋರ್‌ವೆಲ್‌ಗಳಿಂದ ನೀರುಣಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದು, ಬಾಡುತ್ತಿದ್ದ ಬೆಳೆಗೆ ಇನ್ನೂ ಮಳೆ ಬೇಕಿದ್ದರಿಂದ ಹುಬ್ಬ ಮಳೆ ಮೇಲೆ ರೈತರ ನಿರೀಕ್ಷೆ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net