

ಬೆಳಗಾವಿ : ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ, ಸಮಾನತೆ ಹಾಗೂ ಏಕತೆ ಸಾರಿದ ಮಹಾನ್ ಗ್ರಂಥ ಭಾರತ ಸಂವಿಧಾನ ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ ಸೇಠ್ ತಿಳಿಸಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆದ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭ್ರಾತೃತ್ವದ ಉದಾತ್ತ ಚಿಂತನೆಗಳನ್ನು ಸಾರುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವ ದಿನವಿದು, ಅವರ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸದ ವಿಷಯ. ಸಂವಿಧಾನ ಸರ್ವರಿಗೂ ಶಿಕ್ಷಣ, ಸಮಾನತೆಯ ಹಕ್ಕು ಕಲ್ಪಿಸಿದೆ. ಯಾವುದೇ ದೇಶದಲ್ಲಿಯೂ ಕೂಡಾ ಭಾರತ ದೇಶದ ನಾಗರಿಕರಿಗೆ ಇರುವಷ್ಟು ಸ್ವಾತಂತ್ರ್ಯವಿಲ್ಲ. ಭಾರತ ದೇಶ ವಿಶ್ವದಲ್ಲೇ ಮಾದರಿ ರಾಷ್ಟ್ರ ಎಂದು ಶಾಸಕ ಆಸೀಫ್ ರಾಜು ಸೇಠ್ ಅವರು ತಿಳಿಸಿದರು