

ಬೆಳಗಾವಿ : ಸ್ವಾತಂತ್ರ್ಯ ಹೋರಾಟಗಾರರ ತನು, ಮನ, ಧನಗಳ ತ್ಯಾಗ ಮತ್ತು ಆತ್ಮ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯ ನಂತರ ನಮ್ಮ ಭಾರತ ಅನೇಕ ಕ್ಷೇತ್ರಗಳಲ್ಲಿ ಅಭಿವೃಧ್ಧಿ ಹೊಂದಿದೆ. ಇಡೀ ಜಗತ್ತೆ ನಮ್ಮತ್ತ ಕಣ್ಣರಳಿಸಿ ನೋಡುವಂತಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ ಹೇಳಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಹವಾಸಿ ಪ್ರೌಢ ಶಾಲೆ ಹಾಗೂ ಕೆಎಸ್‌ಆರ್ ಶಿಕ್ಷಣ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕೆ.ಎಸ್.ಆರ್ ಕಾಲೇಜು ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ನಾವು ಪ್ರತಿಯೊಂದರಲ್ಲೂ ಸ್ವಾವಲಂಬಿಗಳಾಗಿದ್ದೇವೆ. ವಿಜ್ಞಾನ-ತಂತ್ರಜ್ಞಾನ, ಕಂಪ್ಯೂಟರಗಳಲ್ಲಂತೂ ಇಡೀ ಪ್ರಪಂಚದ ತುಂಬೆಲ್ಲ ಭಾರತೀಯರೇ ತುಂಬಿದ್ದಾರೆ. ಆದರೆ, ದೇಶ ಭಕ್ತಿ, ದೇಶ ಪ್ರೇಮ, ಸೋದರತ್ವ, ಭಾವೈಕ್ಯತೆ, ಸರ್ವಧರ್ಮ, ಸಹಿಷ್ಣುತೆ, ತ್ಯಾಗ, ಬಲಿದಾನ ಮುಂತಾದುವುಗಳನ್ನು ನಮ್ಮ ನಾಡಿನ ವಿದ್ಯಾರ್ಥಿ/ನಿಯರಲ್ಲಿ ಕಡಿಮೆ ಆಗುತ್ತಿರುವದನ್ನು ನಾವು ಗಮನಿಸುತ್ತಿಲ್ಲ. ನೈತಿಕತೆ ನೆಲೆಗಟ್ಟಿನ ಮೇಲೆ ಸತ್ಯ ಅಹಿಂಸೆ ತ್ಯಾಗಗಳ ಮೇಲೆ ನಮ್ಮ ಸ್ವಾತಂತ್ರನಿಂತಿದೆ ಎಂಬುದನ್ನು ಅರಿತು ಮುನ್ನಡಯಬೇಕಿದೆ ಎಂದರು.
ನಮ್ಮ ವೈಯಕ್ತಿಕ ಧರ್ಮಗಳ ಪ್ರಭಾವದಲ್ಲಿ ರಾಷ್ಟ್ರ ಧರ್ಮವನ್ನು ಮರೆಯುತ್ತಿದ್ದೇವೆ. ಭಯೋತ್ಪಾದಕತೆ, ಭಾಷಾ-ವೈಷಮ್ಯೆ, ಜಾತಿಗಲಭೆಗಳು ಮತ್ತೆ ಮತ್ತೆ ತಲೆ ಎತ್ತುತ್ತಿವೆ. ಅದರಿಂದ ಭಾರತದ ಒಕ್ಕೂಟಕ್ಕೆ ಧಕ್ಕೆ ಆಗುವದೆಂಬ ಅರಿವೇ ನಮಗೆ ಆಗುತ್ತಿಲ್ಲ. ವಸ್ತು ಸ್ಥಿತಿಯು ಹೀಗಿರುವದನ್ನು ಬದಲಿಸಿ ಇಡೀ ಭಾರತವೇ ಒಂದು ಕುಟುಂಬ -ನಾವೆಲ್ಲಾ ಸಹೋದರರು ಎಂಬ ಭಾವನೆ ನಾಳಿನ ನಾಗರಿಕರು -ನಾಯಕರಾಗಲಿರುವ ಬಾಲಕ ಬಾಲಕಿಯರಲ್ಲಿ ಒಡಮೂಡಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಪಿ ಪಮ್ಮಾರ, ಉಪಾದ್ಯಕ್ಷ ಆರ್.ಜಿ ನಾಯಕ, ಕೆಎಸ್‌ಆರ್‌ಆರ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ಬಿ.ಜಿ ಧಾರವಾಡ, ಮುಖ್ಯೋಪಾದ್ಯಾಯ ಬಿ.ಎಂ.ಮಠ ಸೇರಿದಂತೆ ಸಿಬ್ಬಂದಿ ಇದ್ದರು.