

ಬೆಳಗಾವಿ : ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಅಬ್ಬರಿಸಿತು. ಮಂಗಳವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ವಾತಾವರಣದಲ್ಲಿ ತಂಪು ಪಸರಿಸಿದ್ದು, ಜಿಲ್ಲೆಯಲ್ಲಿ ಸಪ್ತ ನದಿಗಳಿಗೆ ಒಳಹರಿವು ಹೆಚ್ಚಾಗಿದೆ.
ಬೆಳಗಾವಿ ಜಿಲ್ಲೆ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಲ್ಲಿಯೂ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅಲ್ಲದೇ, ಘಟಪ್ರಭಾ ಜಲಾಶಯಕ್ಕೆ 13 ಸಾವಿರಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ ರುಕ್ಮಿಣಿ ಮಂದಿರ ಜಲಾವೃತಗೊಂಡಿದೆ.
ಖಾನಾಪುರ ತಾಲೂಕಿನಲ್ಲಿಯೂ ಹೆಚ್ಚಿನ ಮಳೆಯಾಗಿದ್ದರಿಂದ ಮಲಪ್ರಭಾ ನದಿ ನೀರಿನಲ್ಲಿ ಹಬ್ಬಾನಹಟ್ಟಿ ಮಾರುತಿ ಮಂದಿರವು ಸಂಪೂರ್ಣ ಜಲಾವೃತಗೊಂಡಿದ್ದು, ಸ್ವಾಮೀಜಿ ಪಂಡೀತ ದೇವೇಂದ್ರ ಶರ್ಮ ಅವರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ, ಇಟಗಿಯ ಮರುಳಶಂಕರ ದೇವಾಲಯ ಮುಳುಗಡೆಯಾಗಿವೆ. ಅಲ್ಲದೇ, ಜಾಂಬೋಟಿ, ಕಣಕುಂಬಿ, ನಾಗರಗಾಳಿ,ಭೀಮಗಡ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ ಹಾಗೂ ನೀಲಾವಡೆಯ ಅರಣ್ಯಪ್ರದೇಶದ 50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಜಲಾವೃತಗೊಂಡಿದ್ದು, ಸಂಪರ್ಕಕಳೆದುಕೊಂಡಿರುವ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಜಿಲ್ಲೆಯ ಕೃಷ್ಣಾ, ಮಾರ್ಕಂಡೇಯ, ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದು, ಗೋಕಾಕ್ ಫಾಲ್ಸ್ ನೋಡಲು ಸಾವಿರಾರು ಜನ ದಾಂಗುಡಿ ಇಡುತ್ತಿದ್ದಾರೆ. ಅಪಾಯದ ಮುನ್ನೆಚ್ಚರಿಕೆಯಿಂದಾಗಿ ಬೆಳಗಾವಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಗೋಕಾಕ್ ಫಾಲ್ಸ್ ಪ್ರವೇಶ ನಿರ್ಬಂಧಿಸಿದ್ದಾರೆ. ಚಿಕ್ಕೋಡಿ, ಅಥಣಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಬೆಳಗಾವಿ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ್, ಯರಗಟ್ಟಿ ಹಾಗೂ ಹುಕ್ಕೇರಿ ತಾಲೂಕಿನಲ್ಲಿಯೂ ಮಳೆ ಮುಂದುವರಿದಿದೆ. ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಸಾರ್ವಜನಿಕರು ಪರದಾಡಿದರು.