8.25 ಲಕ್ಷ ರೂ.ಮೌಲ್ಯದ 23 ಬೈಕ್ ವಶ  ಜಿಲ್ಲಾ ಪೊಲೀಸ್ ಕಾರ್ಯಾಚರಣೆ

IMG_20230824_210737.jpg
Published on

ಬೆಳಗಾವಿ : ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಬಂಧಿಸಿರುವ ಬೆಳಗಾವಿ ಜಿಲ್ಲಾ ಪೊಲೀಸರು 8.25 ಲಕ್ಷ ರೂ.ಬೆಲೆ ಬಾಳುವ ಒಟ್ಟು 23 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟದ ಕೊಲ್ಲಾಪುರ ಜಿಲ್ಲೆಯ ಕಳಂಭ ಗ್ರಾಮದ ಸಂತೋಷ ರಾಮಚಂದ್ರ ನಿಶಾನೆ ಹಾಗೂ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಭರಮಪ್ಪ ಯಲ್ಲಪ್ಪ ಕೊಪ್ಪದ  ಬಂಧಿತರು.

ಇತ್ತಿಚೆಗೆ ಗೋಕಾಕ ನಗರದ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಅಂಕಲಗಿ ಮತ್ತು ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.
ಈ ಕುರಿತು  ಗೋಕಾಕ ವೃತ್ತದ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಗುರುವಾರ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಬಂಧಿತರಿಂದ ಮಹಾರಾಷ್ಟ್ರದ ಕೊಲ್ಲಾಪುರ, ಕರವೀರ, ಇಂಚಲಕರಅಜಿ, ಹಾಥಕಣಗಲಾ, ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನವಾಗಿದ್ದ  ಒಟ್ಟು 23 ದ್ವಿಚಕ್ರ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಂಕಲಗಿ ಪಿಎಸ್‌ಐ ಎಚ್.ಡಿ.ಯರಝರ್ವಿ, ಗೋಕಾಕ ಶಹರ ಪಿಎಸ್‌ಐ ಎಂ.ಡಿ.ಘೋರಿ ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆ ಕಿರಣ ಮೋಹಿತ, ಪೇದೆಗಳಾದ ಬಿ.ವಿ.ನೇರ್ಲಿ, ವಿಠಲ ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಂ.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಂ.ಎಂ.ಹಾಲೊಳ್ಳಿ, ಎ.ಆರ್.ಮಾಳಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net