ಯುವ ರೈತ ದಂಪತಿ ಬಲೆ ಪಡೆದ ವಿದ್ಯುತ್ ತಂತಿ : ಹೆಸ್ಕಾಂ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ, ಸೂಕ್ತ ಪರಿಹಾರಕ್ಕಾಗಿ ಆಗ್ರಹ

IMG-20230806-WA0022.jpg
Published on

ಬೆಳಗಾವಿ : ಜಮೀನಿನಲ್ಲಿ  ಕ್ರಿಮಿನಾಶಕಗಳ ಸಿಂಪಡಣೆ ಮಾಡುವಾಗ ವಿದ್ಯುತ್ ತಂತಿ ಹರಿದು ಮೈ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಯುವ ರೈತ ದಂಪತಿ ಸ್ಥಳದಲ್ಲೇ ಸಾವಿಗೀಡಾದ ಧಾರುಣ ಘಟನೆ ಭಾನುವಾರ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಅಮಿತ್ ದೇಸಾಯಿ(28) ಹಾಗೂ ಲತಾ ದೇಸಾಯಿ(25) ಮೃತ ದುರ್ದೈವಿಗಳಾಗಿದ್ದಾರೆ. ಮೃತರಿಗೆ ವೃದ್ಧ ತಂದೆ-ತಾಯಿ ಹಾಗೂ ಏಳು ವರ್ಷದ ಮಗಳಿದ್ದು ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಂಪತಿ ತಮ್ಮ ಜಮೀನಿನಲ್ಲಿ  ಬೆಳೆದ ಬೆಳೆಗಳಿಗೆ ತುಂತುರು ಮಳೆ ನಡುವೆಯೇ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದರು. ಈ ವೇಳೆ ಮೇಲಿದ್ದ ವಿದ್ಯುತ್ ತಂತಿ ಏಕಾಏಕಿ ತುಂಡರಿಸಿ ಬಿದ್ದಿದ್ದು, ಗಾಬರಿಗೊಂಡ ಅಮಿತ್ ಮೈಮೇಲೆ ಬಿದ್ದಿದ್ದು, ನೋಡಿದ ಲತಾ ಅವರು  ಪತಿಯನ್ನು ಕಾಪಾಡುವುದಕ್ಕಾಗಿ ತಂತಿ ಹಿಡಿದಿದ್ದರಿಂದ ಇಬ್ಬರೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಜಮಾಯಿಸಿದ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಕಾರಣವಾಗಿದ್ದು, ವಿದ್ಯುತ್ ಕಂಬದಲ್ಲಿ ಕಟ್ಟಿದ್ದ ತಂತಿ ಸಂಪೂರ್ಣ ಜಂಗು ಹತ್ತಿದ್ದರಿಂದ ಕಳಚಿ ಬಿದ್ದಿದೆ. ದಂಪತಿಗಳ ಸಾವಿಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿಯೊಬ್ಬರು, 'ಜಮೀನಿನಲ್ಲಿ ಬೋರವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುತ್ತಾರೆ. ಬೇಸಿಗೆಯಲ್ಲಿ ಜೋತು ಬಿದ್ದ ತಂತಿಯ ಮೇಲೆ ಮಳೆಗಾಲದಲ್ಲಿ ಮರದ ಕೊಂಬೆಗಳು ಬಿದ್ದು ಹೀಗಾಗಿರುವ ಸಾಧ್ಯ ಇದೆ' ಎಂದು ಹೇಳಿದರು. ಘಟನೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net