

ಬೆಳಗಾವಿ : ಸ್ವಾರ್ಥಕ್ಕಾಗಿ, ಸ್ವಹಿತಕ್ಕಾಗಿ ಕೆಲಸ ಮಾಡಿದವರನ್ನು ಸಮಾಜ ಬಹುಬೇಗ ಮರೆಯುತ್ತದೆ. ಸಮಾಜಕ್ಕಾಗಿ, ಪ್ರಜೆಗಳ ಒಳಿತಿಗಾಗಿ ಕೆಲಸ ಮಾಡಿದವರು ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಆಯೋಜಿಸಿದ್ದ ಎಂಜಿನಿಯರ್ಸ್ ಡೇ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ತಯಾರಾದಷ್ಟು ಎಂಜಿನಿಯರ್ ಗಳು ವಿಶ್ವದ ಬೇರೆಲ್ಲೂ ತಯಾರಾಗುವುದಿಲ್ಲ. ಅತ್ಯಂತ ಶ್ರೇಷ್ಠ ಎಂಜಿನಿಯರ್ ಗಳನ್ನು ತಯಾರಿಸುವ ದೇಶ ನಮ್ಮದು. ಶ್ರಮ ಜೀವಿಗಳಿಗೆ ಸಾಧಿಸುವ ಛಲ ಇರುತ್ತದೆ. ಚಂದ್ರಯಾನ ಯಶಸ್ವಿ ಮಾಡುವಲ್ಲಿ ಶೇ.30ಕ್ಕಿಂತ ಹೆಚ್ಚು ಮಹಿಳೆಯರ, ಅದರಲ್ಲೂ ಗ್ರಾಮೀಣ ಮಹಿಳೆಯರ ಕೊಡುಗೆ ಇದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಇಂಜಿನಿಯಸ್ ಇಲ್ಲದ ದೇಶವನ್ನು, ನಾಡನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರಸ್ಯ ಸಿಕ್ಕಿದ ಸಂದರ್ಭದಲ್ಲಿ ಅತ್ಯಂತ ಸಂಕಷ್ಟದಲ್ಲಿದ್ದ ನಾಡನ್ನು ಅತ್ಯದ್ಭುತವಾಗಿ ಕಟ್ಟಿ ನಿಲ್ಲಿಸಿದ ಕೀರ್ತಿ ಎಂಜಿನಿಯರ್‌ಗಳಿಗೆ ಸಲ್ಲುತ್ತದೆ. ಸರ್ಕಾರ ಕೆಲಸ ಮಾಡಲು ಆದೇಶಿಸಬಹುದು, ಹಣ ಕೊಡಬಹುದು, ಆದರೆ, ಆ ಕೆಲಸವನ್ನು ಜಾರಿಗೊಳಿಸಬೇಕಾದವರು ಇಂಜಿನಿಯರ್‌ಗಳು. ಶ್ರದ್ಧೆ, ನಿಷ್ಠೆಯಿಂದ ಇಂಜಿನಿಯರ್‌ಗಳು ಆ ಕೆಲಸವನ್ನು ಪೂರೈಸುತ್ತಾರೆ. ಆಗ ಅದ್ಭುತವಾದ ಕಟ್ಟಡವೋ, ಸೇತುವೆಯೋ, ರಸ್ತೆಯೋ ನಿರ್ಮಾಣವಾಗುತ್ತದೆ. ಇದು ಅವರ ಶಕ್ತಿ, ಇದು ದೇಶ ಕಟ್ಟುವ ಕೆಲಸ ಎಂದು ಹೆಬ್ಬಾಳಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ಪ್ರಾಮಾಣಿಕತೆ, ಶ್ರಮ, ದೂರದರ್ಶಿತ್ವದಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವವರು ಇಂಜಿನಿಯರ್‌ಗಳು. ಒಂದು ಕೆಲಸ ಯಶಸ್ವಿಯಾಗಬೇಕಾದರೆ ಆ ಕೆಲಸ ಮಾಡುವವರು ಮೊದಲು ಅದನ್ನು ಪ್ರೀತಿಸಬೇಕು ಎಂದು ವಿಶ್ವೇಶ್ವರಯ್ಯ ಅವರು ಹೇಳಿದ್ದಾರೆ. ಶ್ರದ್ಧೆ ಇಲ್ಲದಿದ್ದರೆ, ಕೆಲಸದಲ್ಲಿ ಪ್ರೀತಿ ಇಲ್ಲದಿದ್ದರೆ ಅದರಲ್ಲಿ ಜೀವಂತಿಕೆಯನ್ನು ಕಾಣಲು ಸಾಧ್ಯವಿಲ್ಲ. ಕೇವಲ ಕಾಟಾಚಾರದ ಕೆಲಸವಾಗುತ್ತದೆ. ಹೆಚ್ಚಿನ ಜ್ಞಾನ, ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ. ಹಾಗಾಗಿ ನಾವು ಏನನ್ನು ಮಾಡುತ್ತೇವೋ ಅದರಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು’ ಎಂದರು.
ಇದೇ ಸಂದರ್ಭದಲ್ಲಿ ಸಾಧಕ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಇಂಜಿನಿಯರ್ಸ್ ಅಸೋಸಿಯೇಶನ್ ಚೇರ್ಮನ್ ರಮೇಶ ಜಂಗಲ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಇಂಜಿನಿಯರ್ ವಿ.ಬಿ.ಜಾವೂರ್, ಸಂಘದ ಗೌರವ ಕಾರ್ಯದರ್ಶಿ ವೀರಣ್ಣ, ಇಸ್ರೋದ ಹಿರಿಯ ವಿಜ್ಞಾನಿಗಳಾದ ರಾಮನಗೌಡ ನಾಡಗೌಡ, ಶ್ರೀನಿವಾಸ ಇತರರಿದ್ದರು.