

ಬೆಳಗಾವಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರುನಾಮಕರಣಗೊಂಡರೂ ನೂತನ ನಾಮಫಲಕ ಅಳವಡಿಸಿಕೊಳ್ಳದೇ ಸಾರ್ವಜನಿಕರಲ್ಲಿ ಗೊಂದಲಕ್ಕೀಡು ಮಾಡುತ್ತಿದ್ದ ಬೆಳಗಾವಿ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯ ಕೊನೆಗೂ ಮಂಗಳವಾರ ನೂತನ ನಾಮಫಲಕ ಅಳವಡಿಸಿಕೊಂಡಿದೆ.
‘ಹಳೇ ಹೆಸರಿಗೆ ಜೋತು ಬಿದ್ದ ಇಲಾಖೆ!’ ಶೀರ್ಷಿಕೆಯಡಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ, ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಬೆಳಗ್ಗೆಯೇ ಬೋರ್ಡ್ ಬದಲಾಯಿಸಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ ತಾಲೂಕು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಅಳವಡಿಸಿದ್ದ ಗೊಂದಲದ ನಾಮಫಲಕವನ್ನು ತೆರವುಗೊಳಸಲಾಗಿದೆ.
ಈ ಬಗ್ಗೆ ವಿಜಯವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಬಿಇಒ ಸಾದಪ್ಪ ದಾಸಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರು ಬದಲಾಯಿಸಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಎಂದು ಬೋರ್ಡ್ ಬರೆಸಲಾಗಿತ್ತು. ಆದರೆ, ಉನ್ನತ ಅಧಿಕಾರಿಗಳು ನಿರ್ದೇಶನದಂತೆ ಶಾಲಾ ಶಿಕ್ಷಣ ಎಂದಷ್ಟೇ ಕಾರ್ಯಾಲಯದ ಬೋರ್ಡ್‌ನಲ್ಲಿ ಬರೆಯಿಸಿ ಹಾಕುತ್ತೇವೆ ಎಂದು ಹೇಳಿದರು.