ರೈತರ ಬೆಳೆಗೆ ಬೆಂಬಲ ಬೆಲೆ, ಕೂಲಿಕಾರರಿಗೆ ಕನಿಷ್ಠ ಕೂಲಿ ನೀಡಿ

IMG-20230809-WA0012.jpg
Published on

ಬೆಳಗಾವಿ: ಕಾರ್ಮಿಕರಿಗೆ ಕನಿಷ್ಠ ಕೂಲಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರದ ಜನ‌ ವಿರೋಧಿ ನೀತಿ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ, ನಗರದ ಡಾ. ಬಿ. ಆರ್. ಅಂಬೇಡ್ಕರ್ ಉದ್ಯಾನದಿಂದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೇಖಾನ್ ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ಒಂಬತ್ತು ವರ್ಷದಲ್ಲಿ 800 ರೂ. ಸಿಲಿಂಡರ್ ಬೆಲೆ ಏರಿಸಿರೋದು ಅಚ್ಛೇ ದಿನ್. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡುತ್ತಿರುವಾಗ ನಿಮ್ಮ ಬೇಟಿ ಬಚಾವ್, ಬೇಟಿ ಪಡಾವ್ ಘೋಷಣೆ ಎಲ್ಲಿ ಹೋಯ್ತು..? ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಕೂಡ ಪ್ರಧಾನಿ ಮೋದಿ ವಿದೇಶ ಸುತ್ತುತ್ತಿದ್ದಾರೆ. ಹಾಗಾಗಿ ಮೋದಿ ಚಲೇಜಾವ್ ಚಳುವಳಿ ಮಾಡಬೇಕಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ‌ ಮಾತನಾಡಿದ ಜಿ.ಎಂ. ಜೈನೇಖಾನ್, ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭಿಸಿದ್ದ ದಿನ. ಆ ನಿಮಿತ್ತ ಕೇಂದ್ರದ ಕಾರ್ಮಿಕ, ಮಹಿಳಾ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಖಾಸಗೀಕರ ಹೆಸರಿನಲ್ಲಿ ಮೋದಿ ಸರ್ಕಾರ ಇಡೀ ದೇಶವನ್ನೆ ಮಾರಾಟ ಮಾಡುತ್ತಿದೆ. ಹಿಂದೆ ವಾಸ್ಕೋಡಿ ಗಾಮಾ ಭಾರತಕ್ಕೆ ಬಂದಂತೆ ಈಗ ಅದೇ ರೂಪದಲ್ಲಿ ಬಂದಿರುವ ಮೋದಿ ಭಾರತ ದೇಶ ಮಾರಾಟಕ್ಕೆ ನಿಂತಿದ್ದಾರೆ ಎಂದು ಕಿಡಿಕಾರಿದರು.

ದುಡಿಯುವ ಜನರಿಗೆ ಕನಿಷ್ಠ ವೇತನ ನಿಗದಿ ಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರ ಮೂಲಕ ಪ್ರಧಾನಮಂತ್ರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಜಿ.ವ್ಹಿ. ಕುಲಕರ್ಣಿ, ದಿಲೀಪ ವಾರ್ಕೆ, ಎಲ್.ಎಸ್.ನಾಯಿಕ, ಸಿ.ಎ.ಖರಾಡೆ, ದೊಡ್ಡವ್ವ ಪೂಜಾರಿ, ಮಂದಾ ನೇವಗಿ, ಚನ್ನಮ್ಮ ಗಡ್ಕರಿ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net