ಬೆಳಗಾವಿ ರಸ್ತೆಗಳ ಸ್ಥಿತಿ ಅಯೋಮಯ!

17manju3c
Published on

ಬೆಳಗಾವಿ: ವಾರದಿಂದ ಸುರಿಯುತ್ತಿರುವ ಮಳೆಯಿಂದ ನಗರದ ರಸ್ತೆಗಳ ಬಣ್ಣ ಬಯಲಾಗಿದೆ. ಹದಗೆಟ್ಟ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಪರದಾಡುವಂತಾಗಿದೆ. ಗುಂಡಿಗಳಲ್ಲಿ ಬಿದ್ದು ಸವಾರರು ಕೈ, ಕಾಲು ಮುರಿದುಕೊಂಡಿದ್ದು, ಪಾಲಿಕೆ, ಲೋಕೋಪಯೋಗಿ ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮಹಾನಗರ ಪ್ರವೇಶಿಸುವ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ, ವಾರ್ಡ್​ಗಳಿಗೆ, ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಪಾಲಿಕೆ, ದಂಡು ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆ, ವಾರ್ಡ್​ಗಳಲ್ಲಿ ರಸ್ತೆಗಳು, ಸರ್ವಿಸ್​ ರಸ್ತೆಗಳು ಸೇರಿ ಅಂದಾಜು 210 ಕಿಮೀ ನಷ್ಟು ರಸ್ತೆಗಳು ಹಾಳಾಗಿವೆ. ಮಳೆ ಆರಂಭವಾಗಿದ್ದರಿಂದ ಈ ರಸ್ತೆಗಳಲ್ಲಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ ಹಳೆ ಪಿಬಿ ರಸ್ತೆ ಸಂಪರ್ಕಿಸುವ ಪೋರ್ಟ್​ ರಸ್ತೆ, ಶಿವಾಜಿ ಗಾರ್ಡ್​ನ ಸುತ್ತಮುತ್ತಲಿನ ರಸ್ತೆಗಳು, ಶಹಪುರ, ವಡಗಾಂವ, ಸಮರ್ಥ ನಗರ, ಹೊಸ ಗಾಂಧಿ ನಗರ, ರಾಣಿ ಚನ್ನಮ್ಮ ನಗರ, ವಿಶ್ವೇಶ್ವರಯ್ಯ ನಗರ, ಗುಡ್​ಸೆಡ್​ ರಸ್ತೆ, ಉದ್ಯಮಬಾಗ, ವಿಜಯ ನಗರ, ಮಹಾಂತೇಶ ನಗರ, ರಾಮತೀರ್ಥ ನಗರ, ಎಪಿಎಂಸಿ ಯಾರ್ಡ್​, ನೆಹರು ನಗರ ಸೇರಿ ವಿವಿಧ ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಕಳೆದ ವರ್ಷ ಸುವರ್ಣ ವಿಧಾನಸೌಧದಲ್ಲಿ ಜರುಗಿದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರು, ಗಣ್ಯರು ಓಡಾಡುವ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗಿತ್ತು. ಆದರೆ, ಎರಡು ವಾರಗಳಿಂದ ಸುರಿಯುತ್ತಿರುವುದರಿಂದ ರಸ್ತೆಗಳೆಲ್ಲವೂ ಸಂಪೂರ್ಣ ಹಾಳಾಗಿವೆ. ಇದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ರಸ್ತೆಗಳ ದುರಸ್ತಿಗಾಗಿ ಲಕ್ಷಾಂತರ ರೂ. ಅನುದಾನ ಮೀಸಲಿಡಲಾಗಿದೆ. ರಸ್ತೆಗಳ ದುರಸ್ತಿ ಮಾತ್ರ ಆಗುತ್ತಿಲ್ಲ. ಮಳೆ ಆರಂಭವಾಗಿದೆ ಎಂಬ ನೆಪದಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ವ್ಯಾಪಾರಿಗಳು, ಆಟೋ ಚಾಲಕರು, ವಾಹನ ಸವಾರರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net