ಗೊಂದಲ ಸೃಷ್ಟಿಸಲು ಪಟ್ಟಭದ್ರರ ಪ್ರಯತ್ನ: ಸಚಿವ ಈಶ್ವರಪ್ಪ ಬೇಸರ

Eshwarappa K. S (1)
Published on

ಶಿವಮೊಗ್ಗ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡುವ ಮೂಲಕ ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ಧಟತನವನ್ನು ನಿಭಾಯಿಸುವ ಶಕ್ತಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗಿದೆ. ಇಂತಹ ಕುತಂತ್ರಗಳಿಗೆ ಬಿಜೆಪಿ ಸರ್ಕಾರ ತಕ್ಕ ಉತ್ತರ ಕೊಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಗಲಭೆ ವಿಚಾರದಲ್ಲಿ ಸರ್ಕಾರ ಎಚ್ಚರವಾಗಿದ್ದು ಜನರೂ ಎಚ್ಚರವಾಗಿರಬೇಕು. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಪ್ರಕರಣದಲ್ಲಿ ಈಗಾಗಲೇ 27 ಜನರನ್ನು ಬಂಧಿಸಿದ್ದು ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಭಾಷೆ, ನೆಲ, ಜಲ ಹಾಗೂ ಮಹಾಪುರುಷರ ಬಗ್ಗೆ ರಾಜಕಾರಣ ಮಾಡಬಾರದು. ಉದ್ದವ ಠಾಕ್ರೆ ಮೇಲಿಂದ ಇಳಿದು ಬಂದಿಲ್ಲ. ಎಂಇಎಸ್ ಕಿತಾಪತಿ ಕುರಿತು ಕಾಂಗ್ರೆಸ್ ಉತ್ತರ ನೀಡಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದ ಸಿಎಂಗೆ ಪ್ರಧಾನಿ ಮೋದಿಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಆರಗ ಸಮರ್ಥ: ಗೃಹ ಖಾತೆ ನನ್ನ ಕೈಗೆ ಕೊಟ್ಟು ನೋಡಲಿ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರಗ ಜ್ಞಾನೇಂದ್ರ ಯೋಗ್ಯರಿದ್ದಾರೆ. ವ್ಯವಸ್ಥಿತವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಹಾಗಂತ ಯತ್ನಾಳ್ ಅವರು ಯೋಗ್ಯರಿಲ್ಲ ಅಂತಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net