ಡಿಸಿಸಿ ಬ್ಯಾಂಕಿಗೆ ಚುನಾವಣೆ ವಿಭಿನ್ನ!

DCC
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ರಾಜ್ಯದಲ್ಲಿಯೇ ಶ್ರೀಮಂತ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆ ಈ ಬಾರಿ ವಿಭಿನ್ನವಾಗಿ ನಡೆಯಲಿದೆ.

ಬರುವ ಅಕ್ಟೋಬರ್ 19ರಂದು 16 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ತಾಲೂಕುಗಳ ಸಂಖ್ಯೆ 11ರಿಂದ 15ಕ್ಕೆ ಏರಿಕೆಯಾಗಿರುವ ಹಿನ್ನೆಲೆ ವಿವಿಧ ಸಹಕಾರ ಸಂಘಗಳ ಪರವಾಗಿ ಪ್ರತಿನಿಧಿಸುತ್ತಿದ್ದ ನಿರ್ದೇಶಕರ ಸಂಖ್ಯೆಯನ್ನು 5ರಿಂದ 1ಕ್ಕೆ ಇಳಿಕೆಯಾಗಿದೆ. ಹೀಗಾಗಿ ಎಲ್ಲ ಸಹಕಾರ ಸಂಘಗಳು ಸೇರಿ ತಮ್ಮ ಪರವಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಪ್ರತಿನಿಧಿಸುವ ಒಬ್ಬ ನಿರ್ದೇಶಕರನ್ನು ಮಾತ್ರ ಆಯ್ಕೆ ಮಾಡಬೇಕು. ಇನ್ನುಳಿದ 15 ನಿರ್ದೇಶಕರು ಪಿಕೆಪಿಎಸ್‌ಗಳ ಮೂಲಕ ಆಯ್ಕೆಯಾಗುತ್ತಾರೆ.

ಈ ಮೊದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಆಡಳಿತ ಮಂಡಳಿ ಸದಸ್ಯರು ಸೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಆಯ್ಕೆ ಮಾಡುತ್ತಿದ್ದರು. ಗ್ರಾಹಕರ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೈಗಾರಿಕಾ ಸಹಕಾರ ಸಂಘಗಳು, ನೇಕಾರ ಸಹಕಾರ ಸಂಘಗಳು ಸೇರಿ ಐವರನ್ನು ನಿರ್ದೇಶಕರ ಸ್ಥಾನಗಳಿಗೆ ಆಯ್ಕೆ ಮಾಡಿ ಕಳುಹಿಸಿದ್ದರು. ಈಗ ಇದರಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಿಧ ಸಹಕಾರ ಸಂಘಗಳು ಸೇರಿ ಒಬ್ಬ ನಿರ್ದೇಶಕನನ್ನು ಆಯ್ಕೆ ಮಾಡಬೇಕಿದೆ.

ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಪಕ್ಷಾತೀತವಾಗಿ ಪ್ಯಾನಲ್ ಅಡಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಪ್ರಚಾರ, ಸಿದ್ಧತೆ ಆರಂಭಿಸಿದರೆ, ಕೆಲ ಆಕಾಂಕ್ಷಿಗಳು ಪಕ್ಷೇತರವಾಗಿ ಸ್ಪರ್ಧಿಸಲು ತಾಲೂಕು ಮಟ್ಟದಲ್ಲಿ ಗೌಪ್ಯ ಸಭೆಗಳನ್ನು ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.

ಪಕ್ಷದ ಮೀರಿದ ವೈಯಕ್ತಿಕ ಲೆಕ್ಕಾಚಾರ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ವೈಯಕ್ತಿಕ ಪ್ರಭಾವ ಉಳಿಸಿಕೊಳ್ಳಲು ಅಥವಾ ನಿರ್ದೇಶಕ ಸ್ಥಾನಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಿಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪರಸ್ಪರ ವಿರೋಧಿಯಾಗಿದ್ದ ಕೆಲ ನಾಯಕರು ಈಗ ಕೈಜೋಡಿಸಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿ ಬದಲಿ, ಸ್ಥಳೀಯ ಮುಖಂಡರನ್ನು ಬೆಂಬಲಿಸುವ ಚಟುವಟಿಕೆಗಳು ನಡೆಯುತ್ತಿವೆ. ಜಿಪಂ, ತಾಪಂ ಹಾಗೂ ಮುಂದಿನ ವಿಧಾನಸಭಾ ಚುನಾವಣೆ ಲೆಕ್ಕಾಚಾರಕ್ಕೂ ಮಾರ್ಗದರ್ಶಕವಾಗಬಹುದು ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಡಿಸಿಸಿ ಬ್ಯಾಂಕಿನ ಆರ್ಥಿಕ ವಹಿವಾಟಿನ ವಿವರ ವಿಭಾಗ ಕೋಟಿ ರೂ. ದುಡಿಯುವ ಬಂಡವಾಳ 7894.96 ಕಾಯ್ದಿಟ್ಟ ನಿಧಿ 347.93 ಠೇವಣಿ 5797.29 ಹೂಡಿಕೆ 221.77 ಸಾಲ ವಿತರಣೆ 5230.74 ನಿವ್ವಳ ಲಾಭ 30.56

ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಅತಿದೊಡ್ಡ ಸಹಕಾರಿ ಬ್ಯಾಂಕ್ ಆಗಿದ್ದು, 14 ಲಕ್ಷ ರೈತರಿಗೆ ಶೂನ್ಯ ಬಡ್ಡಿದರ ಸಾಲ ವಿತರಿಸಿದ್ದು, ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಯಾರೂ ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಬಾರದು. ಈ ಬಾರಿ ಮೂಡಲಗಿ ತಾಲೂಕಿನಿಂದ ಯಾರು ಸ್ಪರ್ಧಿಸಬೇಕು ಎಂಬುವುದು ತಾಲೂಕಿನ ಮುಖಂಡರು ಸೇರಿ ನಿರ್ಧರಿಸಲಿದ್ದೇವೆ. ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net