

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಬುಧವಾರದಿಂದ ಆರಂಭಗೊಂಡ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಶಾಂತಿಯು ತವಾಗಿ ನಡೆಯಿತು. 34 ಕೇಂದ್ರಗಳಲ್ಲಿ ಪರೀಕ್ಷೆಗೆ ನೋಂದಣಿಯಾದ 17,079 ವಿದ್ಯಾರ್ಥಿಗಳ ಪೈಕಿ 15,952 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 1,117 ವಿದ್ಯಾರ್ಥಿಗಳು ಗೈರು ಉಳಿದಿದ್ದರು.
ಕಲಾ ವಿಭಾಗದಲ್ಲಿ ಇತಿಹಾಸ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 11,699 ವಿದ್ಯಾರ್ಥಿಗಳ ಪೈಕಿ 10,717 ವಿದ್ಯಾರ್ಥಿಗಳು ಹಾಜರಾದರು. 982 ವಿದ್ಯಾರ್ಥಿಗಳು ಗೈರಾಗಿದ್ದರು. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 5,334 ವಿದ್ಯಾರ್ಥಿಗಳ ಪೈಕಿ 5,199 ವಿದ್ಯಾರ್ಥಿಗಳು ಹಾಜರಾದರು. 135 ವಿದ್ಯಾರ್ಥಿಗಳು ಗೈರು ಉಳಿದಿದ್ದರು.
ವಾಣಿಜ್ಯ ವಿಭಾಗದಲ್ಲಿ ಸಾಮಾನ್ಯ ಗಣಿತ ಪರೀಕ್ಷೆಗೆ ನೋಂದಣಿಯಾಗಿದ್ದ 36 ವಿದ್ಯಾರ್ಥಿಗಳೂ ಸಹ ಹಾಜರಾದರು. ಪರೀಕ್ಷಾ ಕೇಂದ್ರದ 200 ಮೀ. ಅಂತರದಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು.