

ಬೆಳಗಾವಿ: ಅತಿವೃಷ್ಟಿ, ಕೋವಿಡ್-19, ಆದಾಯ ಸೋರಿಕೆ, ಅನುದಾನ ಕೊರತೆ ಇನ್ನಿತರ ಸಮಸ್ಯೆಗಳಿಂದ ಬಸವಳಿದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ಮುಗಿದು 20 ತಿಂಗಳು ಕಳೆದರೂ ಚುನಾವಣೆ ನಡೆ ಯುವ ಮುನ್ಸೂಚನೆ ಇಲ್ಲ. ಪರಿಣಾಮ ಬಡವರು, ಕೂಲಿ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಜನಸಂಖ್ಯೆ ಆಧಾರಿತ ವಾರ್ಡ್ ಮರು ವಿಂಗಡನೆ, ವಾರ್ಡ್ ಮೀಸಲಾತಿ ಕಗ್ಗಂಟು ಹಾಗೂ ಸರ್ಕಾರದ ನಿರ್ಲಕ್ಷೃದಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಅಲ್ಲದೆ, ಚುನಾಯಿತ ಸದಸ್ಯರ ಅಧಿಕಾರದ ಅವಧಿ (ಐದು ವರ್ಷಗಳು) 2019ರ ಮಾರ್ಚ್ 10ಕ್ಕೆ ಅಧಿಕಾರ ಪೂರ್ಣಗೊಂಡು ಅಕ್ಟೋಬರ್ 10ಕ್ಕೆ ಬರೋಬ್ಬರಿ 20 ತಿಂಗಳು ಕಳೆಯಿತು. ಚುನಾವಣೆಯಿತ ಸದಸ್ಯರಿಲ್ಲದ ಕಾರಣ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2014ರಲ್ಲಿ ಪಾಲಿಕೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ 58 ಸದಸ್ಯರಲ್ಲಿ 32 ಎಂಇಎಸ್ ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಎಂಇಎಸ್ ಬೆಂಬಲಿತರೇ ನಾಲ್ಕು ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಆಗಿದ್ದರು. ಬಳಿಕ ಮೀಸಲಾತಿ ಬಲದಿಂದಾಗಿ ಕೊನೆಯ ಅವಧಿಯಲ್ಲಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್ ಗಾದಿ ಒಲಿದಿತ್ತು. ಬಳಿಕ ವಿವಿಧ ಕಾರಣಗಳಿಂದಾಗಿ 20 ತಿಂಗಳುಗಳಿಂದ ಚುನಾವಣೆ ಘೋಷಣೆ ಆಗಿಲ್ಲ. 2019ರಲ್ಲಿ ಸಂಭವಿಸಿದ ಅತಿವೃಷ್ಟಿ, 2020ರಲ್ಲಿ ಕೋವಿಡ್-19 ನಿಂದಾಗಿ ಜನರು ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.
ಸರ್ಕಾರದಿಂದ ಯಾವುದೆ ಸೌಲಭ್ಯಗಳು ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. ಆಯಾ ವಾರ್ಡ್‌ನಲ್ಲಿ ಚುನಾಯಿತ ಜನಪ್ರತಿನಿಧಿಗಳು ಜನರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಆದರೆ, ಇದೀಗ ಜನರು ಎಲ್ಲದಕ್ಕೂ ಅಧಿಕಾರಿಗಳ ಬಳಿ ಹೋಗಬೇಕಾಗಿದೆ.ಬಜೆಟ್ ಅನುಮೋದನೆ ಸಿಕ್ಕಿದೆ ಮತ್ತು ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಬಂದಿದೆ. ವಾಸ್ತವದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಕಾಮಗಾರಿಗಳ ಪ್ರಗತಿ ಹಂತದಲ್ಲಿವೆ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ದೂರಿದ್ದಾರೆ.
ವಾರ್ಡ್ ಮರು ವಿಂಗಡನೆ ಇಲ್ಲ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2002ರಲ್ಲಿ ಒಮ್ಮೆ ವಾರ್ಡ್ ಮರು ವಿಂಗಡನೆ ನಡೆದಿತ್ತು. ಬಳಿಕ ನಡೆದಿಲ್ಲ. ಜನಸಂಖ್ಯೆ ಆಧಾರದ ಮೇಲೆ ಪ್ರತಿ 10 ವರ್ಷಕ್ಕೊಮ್ಮೆ ವಾಡ್ ಮರು ವಿಂಗಡನೆ ಮತ್ತು ಪ್ರತಿ 5 ವರ್ಷಕ್ಕೊಮ್ಮೆ ವಾರ್ಡ್ ಮೀಸಲಾತಿ ಬದಲಾಗಬೇಕು. ಆದರೆ, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ ಕೆಲಸ ನಡೆದಿಲ್ಲ. ಇದೀಗ ವಾರ್ಡ್ ಮರು ವಿಂಗಡನೆ ಮತ್ತು ವಾರ್ಡ್ ಮೀಸಲಾತಿ ಕಗ್ಗಂಟು ಚುನಾವಣೆ ನಡೆಯದಿರಲು ಪ್ರಮುಖ ಕಾರಣ ಎನ್ನಲಾಗಿದೆ.
ಗ್ರಾಪಂಗಳ ಸದಸ್ಯರ ಅಧಿಕಾರವಧಿ ಮುಗಿದು ಕೆಲ ತಿಂಗಳು ಪೂರ್ಣಗೊಂಡಿಲ್ಲ. ಅದಾಗಲೇ ಸರ್ಕಾರವು ಚುನಾವಣೆ ನಡೆಸಲು ಮುಂದಾಗಿದೆ. ಆದರೆ, ಪಾಲಿಕೆ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಮುಗಿದು 20 ತಿಂಗಳು ಕಳೆದರೂ ಚುನಾವಣೆ ನಡೆದಿಲ್ಲ. ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲದಂತಾಗಿದೆ. 4 ವರ್ಷದ ಮನೆ ತೆರಿಗೆ ಕಟ್ಟಲು ಸಿಬ್ಬಂದಿಗೆ ಕಮಿಷನ್ ನೀಡುವ ಪರಿಸ್ಥಿತಿ ಬಂದಿದೆ.| ರಮೇಶ ಸೊಂಟಕ್ಕಿ, ಪಾಲಿಕೆ ಮಾಜಿ ಸದಸ್ಯ
ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳ ಮರು ವಿಂಗಡನೆ ಮತ್ತು ವಾರ್ಡ್ ಮೀಸಲಾತಿ ಬದಲಾಯಿಸಬೇಕೋ ಅಥವಾ ಹಾಗೇ ಚುನಾವಣೆ ನಡೆಸಬೇಕೋ ಎಂಬುದರ ಕುರಿತು ಸರ್ಕಾರ ಕ್ರಮ ವಹಿಸುತ್ತದೆ. ಇಲ್ಲಿಯವರೆಗೆ ಚುನಾವಣೆ ಬಗ್ಗೆ ಸರ್ಕಾರದಿಂದ ಯಾವುದೇ ಸೂಚನೆಗಳು ಬಂದಿಲ್ಲ. ಜನರಿಗೆ ಸಮಸ್ಯೆ ಉಂಟಾಗದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. | ಜಗದೀಶ ಕೆ.ಎಚ್., ಪಾಲಿಕೆ ಆಯುಕ್ತ
| ಮಂಜುನಾಥ ಕೋಳಿಗುಡ್ಡ