ಕಸದ ವಿಲೇವಾರಿ ಕಗ್ಗಂಟಿಗೆ ಅಧಿಕಾರಿಗಳೇ ಕಾರಣ

28manju4
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಮಹಾನಗರದ ಜನವಸತಿ, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳ ದಿವ್ಯ ನಿರ್ಲಕ್ಷೃವೇ ಕಾರಣ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಪಿಡಿಒ, ತಾಪಂ, ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಲಾಯಿತು. ಈ ವೇಳೆ ಪಾಲಿಕೆಯವರು ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ದೂರಿದರು.

ಕಳೆದ ನಾಲ್ಕೈದು ದಿನಗಳಿಂದ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿನ ಕಸ ಕೂಡ ಹಾಗೆ ಉಳಿದುಕೊಂಡಿದ್ದು, ಜನರು ಪಾಲಿಕೆಯತ್ತ ಕೈ ಮಾಡುತ್ತಿದ್ದಾರೆ. ಹೀಗಾಗಿ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಖುದ್ದಾಗಿ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಅವಶ್ಯಬಿದ್ದರೆ ಆಯಾ ಗ್ರಾಪಂ ಅಧಿಕಾರಿಗಳ ಜತೆ ಚರ್ಚಿಸಬೇಕು. ಕೇವಲ ಕಚೇರಿಗಳಿಗೆ ಸೀಮಿತಗೊಳ್ಳಬೇಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮವಾಗಲಿ:ಪಾಲಿಕೆ ಆಯುಕ್ತೆ ಶುಭ ಬಿ ಮಾತನಾಡಿ, ಮಹಾನಗರ 14 ದಿನಗಳೊಳಗಾಗಿ ಕಸದ ಸಮಸ್ಯೆದಿಂದ ಮುಕ್ತವಾಗಬೇಕು. ಸಾರ್ವಜನಿಕ ಸ್ಥಳ, ರಸ್ತೆ ವಿವಿಧ ಕಡೆ ತ್ಯಾಜ್ಯ ಎಸೆಯುತ್ತಿರುವ ಅಂಗಡಿಕಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಬೆಳಗಾವಿ ಮಹಾನಗರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಎಸೆಯದೇ ಒಣ ಕಸ, ಹಸಿ ಕಸ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಬೇಕು. ನಗರವು ವಿವಿಧ ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ. ಆದರೆ, ಇಲ್ಲಿಗೆ ಆಗಮಿಸುವವರನ್ನು ತ್ಯಾಜ್ಯದಿಂದ ಬರಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ, ಪರಿಸರ ಅಧಿಕಾರಿ ಹಣಮಂತ ಕಲಾದಗಿ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀಶೈಲ್ ಕಾಂಬಳೆ, ಗ್ರಾಪಂ ಪಿಡಿಒಗಳು ಇತರರಿದ್ದರು.

ತೆರಿಗೆ ವಂಚನೆ ತಡೆಗೆ ಪಾಲಿಕೆ ಕ್ರಮಕೈಗೊಳ್ಳಿ

ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಗ್ರಾಪಂಗಳ ನಡುವಿನ ಜನವಸತಿ, ವಾಣಿಜ್ಯ ಕಟ್ಟಡಗಳ ಮಾಲೀಕರು ತೆರಿಗೆ ಎಲ್ಲಿ ಕಟ್ಟುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಪಂ ಸಿಬ್ಬಂದಿ ತೆರಿಗೆ ಕಟ್ಟುವಂತೆ ಸೂಚಿಸಿದರೆ ಪಾಲಿಕೆಯವರ ಕಟ್ಟಡ ಪರವಾನಗಿ ನೀಡಿದ್ದು, ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಪಾಲಿಕೆ, ಗ್ರಾಪಂ ತೆರಿಗೆ ಕಟ್ಟದೆ ವಂಚಿಸುತ್ತಿದ್ದಾರೆ. ಕೂಡಲೇ ಪಾಲಿಕೆ ಆಯುಕ್ತರು ಗಡಿ ಪ್ರದೇಶ ಸರ್ವೆ ನಡೆಸಬೇಕು ಎಂದು ಗ್ರಾಪಂ ಸದಸ್ಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net