

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಸದಾ ಕನ್ನಡ ವಿರೋಧಿ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸರ್ಕಾರ ‘ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ’ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್), ಮರಾಠಿ ಭಾಷಿಕ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆ 1851ರಿಂದ ಅಸ್ತಿತ್ವದಲ್ಲಿದೆ. ಸ್ವಾತಂತ್ರೃಪೂರ್ವ ಭಾಷಾ ಗೊಂದಲ ಅಷ್ಟಾಗಿ ಇರಲಿಲ್ಲವಾದರೂ ರಾಜ್ಯಗಳ ಪುನರ್ವಿಂಗಡಣೆ ಬಳಿಕ ಹುಟ್ಟಿಕೊಂಡಿದ್ದ ಭಾಷಾ ವಿವಾದದಿಂದಾಗಿ ಪಾಲಿಕೆಯಲ್ಲಿ ಕನ್ನಡ ಸಂಪೂರ್ಣ ಕಡೆಗಣಿಸಲಾಗಿತ್ತು. ಕನ್ನಡ ದಾಖಲೆಗಳಿಗೆ ನಿರ್ಬಂಧ ಹೇರಲಾಗಿತ್ತು. ನಾಡಗೀತೆ ಹಾಡಲು, ಕನ್ನಡ ಬಾವುಟ ಕಟ್ಟಲು ಅವಕಾಶ ಇರಲಿಲ್ಲ. ಇಂತಹ ಪಾಲಿಕೆಯಲ್ಲೇ ಕನ್ನಡ ಕಲಿಕಾ ಕೇಂದ್ರ ಸ್ಥಾಪಿಸುವ ಮೂಲಕ ಸರ್ಕಾರ ಐತಿಹಾಸಿಕ ಹೆಜ್ಜೆಯಿಟ್ಟಿದೆ.
2017 ಜೂನ್ 24ರಂದು ಪಾಲಿಕೆಯಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಸಂದರ್ಭದಲ್ಲಿ ಅಂದಿನ ಪ್ರಾದೇಶಿಕ ಆಯುಕ್ತ ಎನ್.ಜಯರಾಂ ಪ್ರಪ್ರಥಮ ಬಾರಿಗೆ ನಾಡಗೀತೆ ನುಡಿಸುವ ಮೂಲಕ ಕರ್ನಾಟಕ ಸರ್ಕಾರದ ಶಿಷ್ಟಾಚಾರ ಅನುಷ್ಠಾನ ಮಾಡಲಾಯಿತು. ಅಲ್ಲಿಂದ ಪಾಲಿಕೆಯ ಪ್ರತಿ ಕಾರ್ಯಕ್ರಮದಲ್ಲೂ ನಾಡಗೀತೆ ಹಾಡುವುದು ಕಡ್ಡಾಯಗೊಂಡಿತು. ಹಂತ- ಹಂತವಾಗಿ ಕನ್ನಡ ವ್ಯಾಪಿಸಿಕೊಂಡು ಬಂದಿತ್ತು. ಇದೀಗ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಕಲಿಕಾ ಕೇಂದ್ರ ಸ್ಥಾಪಿಸುವ ಮೂಲಕ ಎಲ್ಲರಿಗೂ ಕನ್ನಡ ಕಡ್ಡಾಯ ಎಂಬ ಸಂದೇಶ ರವಾನಿಸಿದೆ.
ಕನ್ನಡ ರಾಜ್ಯೋತ್ಸವದೊಳಗಾಗಿ ಕನ್ನಡ ಬಾರದಿರುವ ಪಾಲಿಕೆಯ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರು ಕಡ್ಡಾಯ ಕನ್ನಡ ಬರೆಯಬೇಕು, ಮಾತನಾಡಬೇಕು. ಇಲ್ಲದಿದ್ದರೆ ಅಂತಹವರನ್ನು ವರ್ಗಾವಣೆ ಮಾಡುವ ಜತೆಗೆ ಬಡ್ತಿ ಸೌಲಭ್ಯ ಕಡಿತಗೊಳಿಸುವುದಾಗಿ ಸರ್ಕಾರ ಎಚ್ಚರಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪಾಲಿಕೆಯ 58 ವಾರ್ಡ್‌ಗಳಲ್ಲಿರುವ ವಿವಿಧ ಭಾಗಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಅಧಿಕಾರಿ, ಸಿಬ್ಬಂದಿ ಪೈಕಿ ಶೇ.30 ಜನರಿಗೆ ಕನ್ನಡ ಬರೆಯಲು ಮತ್ತು ಮಾತನಾಡಲು ಬರುವುದಿಲ್ಲ, ಕನ್ನಡದಲ್ಲಿರುವ ದಾಖಲೆಗಳು ಅರ್ಥವಾಗದೆ ತಿರಸ್ಕೃರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಪಾಲಿಕೆಯಲ್ಲಿ ಕನ್ನಡ ಅವಮಾನಿಸುವ ಕೆಲಸಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಕನ್ನಡದಲ್ಲೇ ಪತ್ರ ವ್ಯವಹಾರ ನಡೆಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಸರ್ಕಾರ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿರುವ ಬೆನ್ನಲ್ಲೆ ಪಾಲಿಕೆಯಲ್ಲಿ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ, ಕನ್ನಡ ಕಲಿಸುವ ಶಿಕ್ಷಕರ ನಿಯೋಜನೆಗೆ ಕ್ರಮ ವಹಿಸಿದೆ.
ಮರಾಠಿ, ಉರ್ದು ಭಾಷೆಯಲ್ಲಿ ದಾಖಲೆಗೆ ಆಗ್ರಹ
ಈಗಾಗಲೇ ಪಾಲಿಕೆಯಲ್ಲಿರುವ ಎಂಇಎಸ್ ಬೆಂಬಲಿತ ಸದಸ್ಯರು, ಉರ್ದು ಭಾಷಿಕ ಸದಸ್ಯರು ಕನ್ನಡ ಭಾಷೆ ಅರ್ಥವಾಗುವುದಿಲ್ಲ ನಮ್ಮ ಭಾಷೆಯಲ್ಲೇ ಸುತ್ತೋಲೆ, ನೋಟಿಸ್ ಸೇರಿ ಇತರ ದಾಖಲೆಗಳನ್ನು ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳು, ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ಕನ್ನಡೇತರ ಭಾಷೆಯಲ್ಲಿ ಯಾವುದೇ ದಾಖಲೆ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಪಾಲಿಕೆಯಲ್ಲಿ ಭಾಷಾ ಸಂಘರ್ಷ ಮುಂದುವರಿದುಕೊಂಡು ಬಂದಿದೆ.
ಪಾಲಿಕೆಯ ಕಂದಾಯ, ಯೋಜನಾ ಸೇರಿ ಬಹುತೇಕ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಮರಾಠಿ ಭಾಷೆಯಲ್ಲಿ ವ್ಯವಹರಿಸುತ್ತಿರುವ ಕುರಿತು ದೂರುಗಳು ಬಂದಿವೆ. ಇವರಿಗೆಲ್ಲ ಕನ್ನಡ ಓದಲು, ಬರೆಯಲು ಕಲಿಸಲು ಮುಂದಿನ ವಾರ ಕನ್ನಡ ಕಲಿಕಾ ಕೇಂದ್ರವನ್ನು ಪಾಲಿಕೆಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಶುಭ ಬಿ., ಪಾಲಿಕೆ ಆಯುಕ್ತೆ ಕರ್ನಾಟಕದಲ್ಲಿ ಕನ್ನಡ ಓದಲು, ಬರೆಯಲು ಬಾರದಿರುವವರಿಗೆ ಸರಳವಾಗಿ ಕನ್ನಡ ಕಲಿಸಲು 100 ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಒಂದು ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗುವುದು. ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ